ನವದೆಹಲಿ: ಖರೀದಿ ಅಥವಾ ಪ್ರವಾಸದ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳು ಮತ್ತು ಸೇವೆಗಳಿಗೆ ಒತ್ತು ನೀಡಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಅಗತ್ಯ ಇದ್ದರಷ್ಟೇ ಚಿನ್ನ ಖರೀದಿಸಿ, ಮನರಂಜನೆಗೆ ವಿದೇಶ ಪ್ರವಾಸ, ಹೊರ ದೇಶಗಳಲ್ಲಿ ಮದುವೆ ಬೇಡ. ದೇಶೀಯ ಬಳಕೆಯನ್ನು ಉತ್ತೇಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿನ ಅಕ್ರಮ, ದೆಹಲಿಯ ಜಂತರ್ ಮಂತರ್ ನಲ್ಲಿ ಜೆನ್-ಝೀಗಳ ಪ್ರತಿಭಟನೆ ಸಂದರ್ಭದಲ್ಲಿ ರಾತ್ರಿ ವೇಳೆ ಸರಣಿ ವಿಡಿಯೋ ಮೂಲಕ ಜನರನ್ನುದ್ದೇಶಿಸಿ ಮಾತಾಡಿದ್ದ ಮೋದಿ ಇಂದು ದೇಶದ ಆರ್ಥಿಕತೆ ಬಗ್ಗೆ ವಿಡಿಯೋ ಸಂದೇಶ ನೀಡಿದ್ದಾರೆ.
ಖರೀದಿ ಅಥವಾ ಪ್ರವಾಸದ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳು ಮತ್ತು ಸೇವೆಗಳಿಗೆ ಒತ್ತು ನೀಡುವಂತೆ ಪ್ರಧಾನಿ ನಾಗರಿಕರಿಗೆ ಕರೆ ನೀಡಿದರು. ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮಗಳಿಂದ ಭಾರತವನ್ನು ರಕ್ಷಿಸಲು ಕೆಲ ತಿಂಗಳುಗಳ ಹಿಂದೆ ಮಾಡಿದ್ದ ಮನವಿಯನ್ನು ಅವರು ಮತ್ತೊಮ್ಮೆ ಪುನರುಚ್ಚರಿಸಿದರು.
ನಾವು ಎಷ್ಟರಮಟ್ಟಿಗೆ ಸ್ಥಳೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುತ್ತೇವೆಯೋ, ಅಷ್ಟೇ ವೇಗವಾಗಿ ಭಾರತ ಅಭಿವೃದ್ಧಿ ಹೊಂದಲಿದೆ. ಸ್ವಾವಲಂಬನೆಗೆ ಇದೇ ರೀತಿ ಒತ್ತು ನೀಡಿದರೆ, ಸ್ವಾತಂತ್ರ್ಯದ 100ನೇ ವರ್ಷಕ್ಕೆ ಕಾಲಿಡುವ ವೇಳೆಗೆ ನಮ್ಮ ಯುವಜನತೆಗೆ ‘ಅಭಿವೃದ್ಧಿ ಹೊಂದಿದ ಭಾರತ’ ಹಸ್ತಾಂತರಿಸಲಿದ್ದೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದರು.
ಪ್ರವಾಸೋದ್ಯಮಕ್ಕಾಗಿ ವಿದೇಶಗಳಿಗೆ ಹೋಗಬೇಡಿ. ವಿದೇಶಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ಆಯೋಜಿಸುವುದನ್ನು ತಪ್ಪಿಸಿ. ನಾವೆಲ್ಲರೂ ʻವೆಡ್ ಇನ್ ಇಂಡಿಯಾ ಮಂತ್ರವನ್ನು ಪಾಲಿಸಬೇಕು. ಅಗತ್ಯವಿಲ್ಲದಿದ್ದರೆ ಮಾತ್ರ ಚಿನ್ನ ಖರೀದಿಸಿ ಎಂದರು.
ಸ್ತುತ ಕಿರ್ಗಿಸ್ತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್ ವಿಡಿಯೋ ಸಂದೇಶದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. “ದೇಶದ ಜನತೆಗೆ ಅನಂತ ಧನ್ಯವಾದಗಳು. ಶೇ. 7.8ರಷ್ಟು ಜಿಡಿಪಿ ಬೆಳವಣಿಗೆಯು ದೇಶದಲ್ಲಿ ಸಂತಸ ಮೂಡಿಸಿದೆ. ದೇಶವಾಸಿಗಳ ಸಂಕಲ್ಪ ಶಕ್ತಿ ಮತ್ತು ಕಠಿಣ ಪರಿಶ್ರಮಕ್ಕೆ ನನ್ನ ಅಭಿನಂದನೆಗಳು. ಇದು ನಮ್ಮ ಸಾಮೂಹಿಕ ಶಕ್ತಿಯ ಪ್ರತಿಬಿಂಬವಾಗಿದೆ” ಎಂದು ಹೇಳಿದರು.
ಸಪ್ಲೈ ಚೈನ್ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. 2020ರ ಕೋವಿಡ್ ಸಾಂಕ್ರಾಮಿಕದ ದಿನಗಳಿಂದ ಇಂದಿನವರೆಗೂ ಜಗತ್ತಿನ ಎಲ್ಲಿಯೂ ಸ್ಥಿರತೆ ಕಾಣಿಸುತ್ತಿಲ್ಲ. ಆದಾಗ್ಯೂ, ಭಾರತವು ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ” ಎಂದು ತಿಳಿಸಿದರು.
ವಿಶ್ವಾದ್ಯಂತ ಪ್ರಕ್ಷುಬ್ಧ ವಾತಾವರಣವಿರುವ ಈ ಕಠಿಣ ಸಂದರ್ಭದಲ್ಲೂ ಭಾರತ ಈ ಬೃಹತ್ ಸಾಧನೆ ಮಾಡಿದೆ ಎಂದು ಒತ್ತಿ ಹೇಳಿದ ಪ್ರಧಾನಿ,”ಇಡೀ ವಿಶ್ವವೇ ಯುದ್ಧದ ಕಾರ್ಮೋಡದಲ್ಲಿ ಮುಳುಗಿದೆ. ಸುತ್ತಲೂ ಯುದ್ಧದ ಸುದ್ದಿಗಳೇ ಕೇಳಿಬರುತ್ತಿವೆ ಮತ್ತು ಜಗತ್ತು ಬಿಕ್ಕಟ್ಟುಗಳಿಂದ ಸುತ್ತುವರಿದಿದೆ ಎಂದರು.
ಭಾರತದ ಜಿಡಿಪಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಅಸಾಧಾರಣ ಬೆಳವಣಿಗೆ ಸಾಧಿಸಿರುವುದಕ್ಕೆ ಮೋದಿ ಅವರು ದೇಶದ ಜನತೆಯನ್ನು ಅಭಿನಂದಿಸಿದ್ದಾರೆ. ಜೊತೆಗೆ ʼಆತ್ಮನಿರ್ಭರ ಭಾರತʼ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುವಂತೆ ನಾಗರಿಕರಿಗೆ ಮತ್ತೊಮ್ಮೆ ಕರೆ ನೀಡಿದ್ದಾರೆ.





