ಬೆಂಗಳೂರು: ನಿಯಂತ್ರಣ ಕಳೆದುಕೊಂಡ ಕೆಎಂಎಫ್ನ ಬೃಹತ್ ನಂದಿನಿ ಹಾಲಿನ ವಾಹನವೊಂದು ರಸ್ತೆಯಲ್ಲೇ ಮಗುಚಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಹಾಲು ವ್ಯರ್ಥವಾಗಿರುವ ಘಟನೆ ಹೆಬ್ಬಾಳದ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದೆ. ವಾಹನದಲ್ಲಿದ್ದ ಸುಮಾರು 14,000 ಲೀಟರ್ ಹಾಲು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಹರಿದಿದೆ.
ಡೈರಿಯಿಂದ ಕೆಎಂಎಫ್ ಘಟಕದ ಕಡೆಗೆ ಸಾಗುತ್ತಿದ್ದ ಈ ಟ್ಯಾಂಕರ್, ಹೆಬ್ಬಾಳ ತಲುಪುತ್ತಿದ್ದಂತೆ ಚಾಲಕನ ಹತೋಟಿ ತಪ್ಪಿ ಉರುಳಿಬಿದ್ದಿದೆ. ಅಪಘಾತದ ತೀವ್ರತೆಗೆ ಟ್ಯಾಂಕರ್ನ ಕವಾಟ ಒಡೆದು ರಸ್ತೆಯಲ್ಲೆಲ್ಲ ಹಾಲು ನದಿಯಂತೆ ಹರಿಯಿತು. ಅಪಾರ ಪ್ರಮಾಣದ ಹಾಲು ಪೋಲಾಗುವುದನ್ನು ಕಂಡು ಕೆಲ ಸ್ಥಳೀಯರು ಸೋರಿಕೆ ನಿಲ್ಲಿಸಲು ಹರಸಾಹಸ ಪಟ್ಟರೆ, ಇನ್ನು ಕೆಲವರು ಕೈಗೆ ಸಿಕ್ಕ ನೀರಿನ ಬಾಟಲಿಗಳಲ್ಲಿ ಹಾಲನ್ನು ತುಂಬಿಕೊಳ್ಳಲು ಮುಗಿಬಿದ್ದರು.
ಈ ದುರ್ಘಟನೆಯಲ್ಲಿ ಗಂಭೀರವಾಗಿ ಪೆಟ್ಟು ತಿಂದ ಚಾಲಕನನ್ನು ಸಾರ್ವಜನಿಕರು ತಕ್ಷಣವೇ ರಕ್ಷಿಸಿ, 108 ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಂಜಯನಗರ ಸಂಚಾರ ಪೊಲೀಸರು ಪರಿಶೀಲನೆ ಕೈಗೊಂಡು, ರಸ್ತೆ ಸ್ವಚ್ಛತೆ ಹಾಗೂ ವಾಹನ ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಂಡರು.





