ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ದೇಶಭಕ್ತ – ಶರತ್ ಚಂದ್ರ ಬೋಸ್

ಸೆಪ್ಟೆಂಬರ್ 6 ಮರೆತುಹೋದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನ ಜಯಂತಿ ವಿಶೇಷವಾಗಿದೆ. ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರು ಅಜರಾಮರ. ಆದರೆ ಆ ನೇತಾಜಿಯ ಬೆನ್ನೆಲುಬಾಗಿ, ಅವರ ಪ್ರತಿ ಹೆಜ್ಜೆಯಲ್ಲೂ ನೆರಳಿನಂತೆ ನಿಂತು, ತನ್ನ ಸರ್ವಸ್ವವನ್ನೇ ದೇಶಕ್ಕೆ ಅರ್ಪಿಸಿದ ಇನ್ನೊಬ್ಬ ಮಹಾನ್ ಚೇತನ ಶರತ್ ಚಂದ್ರ ಬೋಸ್. ಇಂದು ಸೆಪ್ಟೆಂಬರ್ 6, ಅವರ 137ನೇ ಜಯಂತಿ. ಈ ದಿನ ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ.

ಬಾಲ್ಯ ಮತ್ತು ಶಿಕ್ಷಣ : ಶರತ್ ಚಂದ್ರ ಬೋಸ್ ಅವರು 1889ರ ಸೆಪ್ಟೆಂಬರ್ 6ರಂದು ಒಡಿಶಾದ ಕಟಕ್‌ನಲ್ಲಿ ಜನಿಸಿದರು. ತಂದೆ ಜಾನಕಿನಾಥ್ ಬೋಸ್, ತಾಯಿ ಪ್ರಭಾವತಿ. ಸುಭಾಷ್ ಚಂದ್ರ ಬೋಸ್ ಅವರಿಗಿಂತ 8 ವರ್ಷ ದೊಡ್ಡವರಾದ ಶರತ್ ಬಾಬು, ಚಿಕ್ಕಂದಿನಿಂದಲೇ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಪಡೆದು, ನಂತರ ಇಂಗ್ಲೆಂಡ್‌ಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದು ಬಂದರು. ಅವರು ಬ್ರಿಟಿಷ್ ಸರ್ಕಾರದ ಅಡಿಯಲ್ಲಿ ದೊಡ್ಡ ವಕೀಲರಾಗಿ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದರು. ಆದರೆ ಗಾಂಧೀಜಿಯವರ ಕರೆಯ ಮೇರೆಗೆ ತಮ್ಮ ಐಷಾರಾಮಿ ವಕೀಲಿ ವೃತ್ತಿಯನ್ನು ತ್ಯಜಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

ಸುಭಾಷ್‌ಗೆ ದಾರಿದೀಪ : ಶರತ್ ಚಂದ್ರ ಬೋಸ್ ಇಲ್ಲದಿದ್ದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಇರುತ್ತಿರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಸುಭಾಷ್ ಅವರು ICS ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬ್ರಿಟಿಷ್ ಅಧಿಕಾರಿಯಾಗುವ ಅವಕಾಶವಿದ್ದಾಗ, “ಬ್ರಿಟಿಷರ ಗುಲಾಮನಾಗಿ ಕೆಲಸ ಮಾಡಬೇಡ, ದೇಶ ಸೇವೆ ಮಾಡು” ಎಂದು ಪ್ರೇರೇಪಿಸಿದ್ದೇ ಈ ಅಣ್ಣ. ಸುಭಾಷ್ ಅವರು ಕಾಂಗ್ರೆಸ್‌ನಲ್ಲಿ, ನಂತರ ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದಾಗ, ಅದಕ್ಕೆ ಆರ್ಥಿಕವಾಗಿ, ರಾಜಕೀಯವಾಗಿ ಬೆಂಬಲವಾಗಿ ನಿಂತವರು ಶರತ್ ಬಾಬು. ಇಬ್ಬರು ಅಣ್ಣ-ತಮ್ಮಂದಿರು ಒಟ್ಟಾಗಿ ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ಪ್ರಬಲ ಶಕ್ತಿಯಾಗಿ ಬೆಳೆದರು.

ಜೈಲು ಜೀವನ ಮತ್ತು ತ್ಯಾಗ.ಬ್ರಿಟಿಷರು ಶರತ್ ಬಾಬು ಅವರನ್ನು ಸುಮಾರು 4 ವರ್ಷಗಳ ಕಾಲ ವಿವಿಧ ಜೈಲುಗಳಲ್ಲಿ ಬಂಧಿಸಿಟ್ಟಿದ್ದರು. 1930ರಿಂದ 1945ರವರೆಗೆ ಅನೇಕ ಬಾರಿ ಬಂಧನಕ್ಕೊಳಗಾದರು. ಆದರೆ ಜೈಲಿನಲ್ಲೂ ಅವರು ದೇಶದ ಸ್ವಾತಂತ್ರ್ಯದ ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಅವರ ಮನೆ “ವುಡ್ಬರ್ನ್ ಪಾರ್ಕ್” ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ತಾಣವಾಗಿತ್ತು.

ಅಖಂಡ ಭಾರತದ ಕನಸುಗಾರ 1947ರಲ್ಲಿ ದೇಶ ವಿಭಜನೆಯಾಗುವ ಸಂದರ್ಭದಲ್ಲಿ ಶರತ್ ಬೋಸ್ ಅವರು ಅದನ್ನು ತೀವ್ರವಾಗಿ ವಿರೋಧಿಸಿದರು. ಅವರು ಮಹಾತ್ಮ ಗಾಂಧಿ ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಮಾತನಾಡಿ, ಬಂಗಾಳವನ್ನು ಒಂದು ಸ್ವತಂತ್ರ, ಅಖಂಡ ರಾಷ್ಟ್ರವಾಗಿ ಉಳಿಸುವ ಪ್ರಯತ್ನ ಮಾಡಿದರು. “ಯುನೈಟೆಡ್ ಬೆಂಗಾಲ್” ಅವರ ಕನಸಾಗಿತ್ತು. ಆದರೆ ದುರದೃಷ್ಟವಶಾತ್ ಅದು ಈಡೇರಲಿಲ್ಲ.
ಸ್ವಾತಂತ್ರ್ಯದ ನಂತರ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗುವ ಅವಕಾಶವನ್ನು ನಿರಾಕರಿಸಿ, ಬಂಗಾಳದ ಜನರ ಸೇವೆಯಲ್ಲೇ ತೊಡಗಿದರು.

ಶರತ್ ಚಂದ್ರ ಬೋಸ್ ಅವರು 1950ರ ಫೆಬ್ರವರಿ 20ರಂದು ಕಲ್ಕತ್ತಾದಲ್ಲಿ ನಿಧನರಾದರು. ಇಂದು ನಾವು ನೇತಾಜಿಯನ್ನು ನೆನೆದಾಗಲೆಲ್ಲಾ, ಅವರ ಹಿಂದಿದ್ದ ಈ ಮಹಾನ್ ತ್ಯಾಗಮೂರ್ತಿ ಅಣ್ಣನನ್ನು ನೆನೆಯಲೇಬೇಕು. ಪ್ರಚಾರದಿಂದ ದೂರವಿದ್ದು, ನಿಸ್ವಾರ್ಥವಾಗಿ ದೇಶ ಸೇವೆ ಮಾಡಿದ ಅವರ ಬದುಕು ಇಂದಿನ ರಾಜಕಾರಣಿಗಳಿಗೆ ದೊಡ್ಡ ಪಾಠ.ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ಮಹಾನ್ ದೇಶಭಕ್ತನಿಗೆ ಸಮರ್ಪಣ ಟ್ರಸ್ಟ್ ವತಿಯಿಂದ ಶತ ಶತ ನಮನಗಳು ಎಂದು ಶ್ರೀರಂಗಪಟ್ಟಣ ಸಮರ್ಪಣ ಟ್ರಸ್ಟ್ ಅಧ್ಯಕ್ಷರಾದ ಕೆ.ಎಸ್. ಜಯಶಂಕರ್ ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others