ದಿನ ನೂರು, ಕಾರ್ಯ ಹಲವಾರು: ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಕಮಾಲ್

ಬೆಂಗಳೂರು: ರಾಜ್ಯದ ಮುಕ್ಕಾಲು ಭಾಗದಷ್ಟು ಅಂದರೆ 4.45 ಕೋಟಿ ಜನ ವಾಸಿಸುವ ಗ್ರಾಮೀಣ ಕರ್ನಾಟಕ ರಾಜ್ಯದ ಜೀವನಾಡಿಯಾಗಿದೆ. ಜೂನ್ 3ರಂದು ಗ್ರಾಮೀಣ ಜನರ ಜೀವನ ಸುಗಮಗೊಳಿಸುವ ಹೊಣೆ ಹೊತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಈ ನಿಟ್ಟಿನಲ್ಲಿ ದಿನ ನೂರು ಕಾರ್ಯ ನೂರಾರು ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎಲ್ ನಿನೋ ಪ್ರಭಾವದಿಂದ ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟು, ಬರದಂತಹ ಪರಿಸ್ಥಿತಿ ಎದುರಾಗಿರುವ ಸಮಯದಲ್ಲಿ ಇಲಾಖೆಯ ಚುಕ್ಕಾಣಿ ಹಿಡಿದ ಈಶ್ವರ ಖಂಡ್ರೆ ಪ್ರಥಮ ಆದ್ಯತೆ ನೀಡಿದ್ದು ಗ್ರಾಮೀಣ ಶುದ್ಧ ಕುಡಿಯುವ ನೀರಿನ ಪೂರೈಕೆಗೆ.

ಉನ್ನತಾಧಿಕಾರಿಗಳ ಸಭೆ ನಡೆಸಿ, ಕುಡಿವ ನೀರಿಗೆ ಮುಂಗಡವಾಗಿ ಬಿಡುಗಡೆ ಮಾಡಿರುವ 117ಕೋಟಿ ರೂ. ಸದ್ಬಳಕೆ ಮಾಡಬೇಕು, ಕುಡಿವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಖಾಸಗಿ ಕೊಳವೆಬಾವಿ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ. ಯಾವುದೇ ಗ್ರಾಮದಿಂದ ದೂರು ಬಂದರೆ 24 ಗಂಟೆಯೊಳಗೆ ನೀರು ಪೂರೈಸಲು ಕ್ರಮ ವಹಿಸುವಂತೆ ಆದೇಶ ನೀಡಿ, ನಿಯಮಿತವಾಗಿ ಎಲ್ಲ ಜಿಲ್ಲಾ ಪಂಚಾಯತಿಗಳ ಸಿಇಓಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅನುಷ್ಠಾನದ ಖಾತ್ರಿ ಪಡಿಸಿಕೊಂಡರು.

ಆರ್ಥಿಕ ಹೊರೆ ನಡುವೆಯೂ ವಿಬಿಜಿ ರಾಮ್ ಜಿ ಜಾರಿ:

ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಮಹಾತ್ಮಾಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿಜಿ ರಾಮ್ ಜಿಯಾಗಿ ಬದಲಾಯಿಸಿದ ಕೇಂದ್ರ ಸರ್ಕಾರ 90:10 ಅನುಪಾತದ ಬದಲಿಗೆ 60:40ರ ಅನುಪಾತದ ಮೂಲಕ ರಾಜ್ಯಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೊರಿಸಿತು.

2006ರಿಂದ 2026ರ ಜೂನ್ ಅಂತ್ಯದವರಿಗೆ 20 ವರ್ಷದಲ್ಲಿ ಕೇಂದ್ರ ಸರ್ಕಾರ ಮನ್ರೇಗಾ ಅಡಿಯಲ್ಲಿ 56492 ಕೋಟಿ ರೂ. ಭರಿಸಿದ್ದರೆ, ರಾಜ್ಯ ಸರ್ಕಾರ 4821 ಕೋಟಿ ಮಾತ್ರ ಭರಿಸಿ ಸುಮಾರು 187 ಕೋಟಿ ಮಾನವ ದಿನಗಳ ಉದ್ಯೋಗ ಸೃಜಿಸಿತ್ತು. ಆದರೆ ಈಗ ಒಂದೇ ವರ್ಷಕ್ಕೆ 3806 ಕೋಟಿ ರೂ. ವೆಚ್ಚ ಭರಿಸುವ ಸ್ಥಿತಿ ಬಂದಿದೆ. ಆದಾಗ್ಯೂ ಗ್ರಾಮೀಣ ಬಡವರ, ದಲಿತರ, ವಂಚಿತರ, ಶೋಷಿತರ ನೆರವಿಗೆ ನಿಲ್ಲಲು ಯೋಜನೆಯನ್ನು ಜುಲೈ 1ರಿಂದ ಜಾರಿಗೆ ತರುವಲ್ಲಿ ಖಂಡ್ರೆ ಶ್ರಮಿಸಿದರು.

ಆರಂಭದಲ್ಲಿ ವಿಬಿಜಿ ರಾಮ್ ಜಿ ಕೆಲವು ಆರಂಭಿಕ ತೊಡಕು ಎದುರಿಸಿತು. ಆದರೆ  ದಿನನಿತ್ಯ ವಿವಿಧ ಜಿಲ್ಲೆಯ ಸಿಇಓಗಳೊಂದಿಗೆ ವಿ.ಸಿ. ನಡೆಸಿ ಹಾಗೂ ತಾವೇ ಖುದ್ದು ವಿಬಿಜಿ ರಾಮ್ ಜಿ ಕಾಮಾಗಾರಿ ನಡೆಯುವ ಸ್ಥಳಕ್ಕೆ ಹೋಗಿ ಕೂಲಿ ಕಾರ್ಮಿಕರಿಗೆ ಉತ್ಸಾಹ ತುಂಬಿದ ಈಶ್ವರ ಖಂಡ್ರೆ, ಇಂದು ಪ್ರತಿ ನಿತ್ಯ 3.8 ಲಕ್ಷ ಮಾನವ ದಿನಗಳ ಸೃಷ್ಟಿಯಾಗುವಂತೆ ಮಾಡಿದ್ದು, ಬರ ಪರಿಸ್ಥಿತಿಯಲ್ಲಿ ಜನ ಹಳ್ಳಿಯಿಂದ ಗುಳೆ ಹೋಗದಂತೆ ಇರುವಲ್ಲಿಯೇ ಉದ್ಯೋಗ ನೀಡುವಂತೆ ಶ್ರಮಿಸುತ್ತಿದ್ದಾರೆ. ಜೊತೆಗೆ 15 ದಿನಗಳೊಳಗೆ ಕೂಲಿ ಹಣ ಪಾವತಿಯಾಗುವಂತೆ ಕ್ರಮ ವಹಿಸಲು ಸೂಚಿಸಿದ್ದಾರೆ.

ಎಲ್ಲ ಗ್ರಾಮ ಪಂಚಾಯತಿಗೆ ಮಹಾತ್ಮಾಗಾಂಧೀ ಹೆಸರು:

ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿ ಎಂದು ಹೆಸರು ಬದಲಾಯಿಸಿ, ನರೇಗಾದಲ್ಲಿದ್ದ ಮಹಾತ್ಮಾ ಗಾಂಧೀ ಹೆಸರನ್ನೇ ತೆಗೆದುಹಾಕಿತು. ಆದರೆ ರಾಜ್ಯ ಸರ್ಕಾರ ರಾಜ್ಯದ ಎಲ್ಲ 5927 ಗ್ರಾಮ ಪಂಚಾಯತಿಗಳ ಹೆಸರಿನ ಮುಂದೆ ಮಹಾತ್ಮಾಗಾಂಧೀ ಗ್ರಾಮ ಪಂಚಾಯತಿ ಎಂದು ಬರೆಸುವ ನಿರ್ಣಯ ಕೈಗೊಂಡಿತು. ಈಶ್ವರ ಖಂಡ್ರೆ ಅವರು ಸಚಿವರಾದ ತರುವಾಯ ಆಗಸ್ಟ್ 15ರ ಗಡುವು ನೀಡಿ ಎಲ್ಲ ಪಂಚಾಯತಿಗೂ ಮಹಾತ್ಮಾಗಾಂಧೀ ಹೆಸರು ಬರೆಸಿದ್ದಾರೆ.

ಇ-ಸ್ವತ್ತು ಸಮಸ್ಯೆಗೆ ಪರಿಹಾರ:

ಇ-ಸ್ವತ್ತು ಕೋರಿ ಅರ್ಜಿ ಸಲ್ಲಿಸಿದವರಿಗೆ ಹಲವು ತಿಂಗಳೇ ಆದರೂ ಖಾತೆ ಪಡೆಯುವಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿ, ಸಮಸ್ಯೆ ಪರಿಹಾರಕ್ಕೆ ಪಂಚ ಸದಸ್ಯರ ಸಮಿತಿ ರಚಿಸಿ ಪರಿಹಾರ ಕಂಡುಕೊಂಡಿರುವ ಅವರು ಮನೆ ಮನೆಗೆ ಇ-ಸ್ವತ್ತು ನೀಡುವ ಅಭಿಯಾನಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ಇ-ಸ್ವತ್ತು ಅರ್ಜಿಗಳ ವಿಲೇವಾರಿ ತ್ವರಿತವಾಗಿ ನಡೆಯುತ್ತಿದ್ದು, ಯಾವುದೇ ದಾಖಲೆ ಇಲ್ಲದ ಗ್ರಾಮಠಾಣಾ ಆಸ್ತಿಗಳಿಗೂ ಇ-ಸ್ವತ್ತು ನೀಡುವ ಬಗ್ಗೆ ಕ್ರಮ ವಹಿಸಿದ್ದಾರೆ.

ಜಲ ಆಯವ್ಯಯ ಮಾಡಿದ ಪ್ರಥಮ ರಾಜ್ಯ ಕರ್ನಾಟಕ:

ದೇಶಾದ್ಯಂತ ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಮೇಲ್ಮೈ ಜಲ ಮೂಲಗಳಾದ ಕೆರೆ, ಕಟ್ಟೆ, ಕುಂಟೆ, ನದಿ, ಸರೋವರಗಳೇ ಜೀವನಾಧಾರವಾಗಿದ್ದು, ಈ ಕೆರೆಗಳ ಸಂರಕ್ಷಣೆಗೆ ಮುಂದಾಗಿರುವ ಈಶ್ವರ ಖಂಡ್ರೆ, ಯಾರೇ ಹೊಸದಾಗಿ ಕೆರೆ ಒತ್ತುವರಿ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಿದ್ದಾರೆ ಮತ್ತು ಈಗಾಗಲೇ ಒತ್ತುವರಿಯಾಗಿರುವ 4828 ಕೆರೆಗಳ 11671 ಎಕರೆ ಒತ್ತುವರಿ ತೆರವಿಗೂ ಆದೇಶ ನೀಡಿದ್ದಾರೆ.

ಜೊತೆಗೆ ರಾಜ್ಯದ ವಿವಿಧ ಗ್ರಾಮದಲ್ಲಿ ಲಭ್ಯವಿರುವ ನೀರು, ಅಲ್ಲಿನ ಜನಸಂಖ್ಯೆ, ಪ್ರತಿಯೊಬ್ಬರಿಗೂ ಪ್ರತಿನಿತ್ಯ 55 ಲೀಟರ್ ನೀರಿನಂತೆ ಎಷ್ಟು ನೀರಿನ ಅಗತ್ಯವಿದೆ. ಕೈಗಾರಿಕೆ, ಶಾಲೆ, ಕಾಲೇಜು, ಸರ್ಕಾರಿ ಕಟ್ಟಡಗಳ ನೀರಿನ ಅವಶ್ಯಕತೆ ಎಷ್ಟು ಯಾವ ಯಾವ ಮೂಲದಿಂದ ನೀರು ಪೂರೈಸಲು ಸಾಧ್ಯ ಎಂಬುದನ್ನು ತಿಳಿಯಲು ಆರಂಭಿಸಲಾಗಿದ್ದ ಜಲ ಆಯವ್ಯಯ (ವಾಟರ್ ಬಜೆಟಿಂಗ್)ಕ್ಕೂ ಚುರುಕು ನೀಡಿದ್ದಾರೆ.

ಮುಂದಿನ 30 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಳವಾಗುವ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಏಕ ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಪೂರೈಸಲು ಒತ್ತು ನೀಡಿದ್ದು, ಅಗತ್ಯ ಬಿದ್ದಲ್ಲಿ ಮಾತ್ರ, ಭೂಗರ್ಭಶಾಸ್ತ್ರ ತಜ್ಞರ ಅಭಿಪ್ರಾಯಪಡೆದು ಕೊಳವೆ ಬಾವಿ ಕೊರೆಸುವಂತೆ ಸೂಚಿಸಿದ್ದಾರೆ.

ಜಲ ಆಸ್ತಿಗಳ ಜಿಯೋ ಟ್ಯಾಗ್ :

ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ ಗಳಿಗೆ ಕಡಿವಾಣ ಹಾಕಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್)  ಆಧಾರಿತ ಮೊಬೈಲ್ ಮತ್ತು ವೆಬ್ ಅಪ್ಲಿಕೇಷನ್ ಗೆ ಚಾಲನೆ ನೀಡಿದ್ದಾರೆ. ಈ ಆಪ್ ನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಕೊರೆಸಲಾಗುವ ಬೋರ್ ವೆಲ್, ನಿರ್ಮಿಸಲಾಗುವ ಓವರ್ ಹೆಡ್ ಟ್ಯಾಂಕ್, ತೆರೆದ ಬಾವಿ, ಪಂಪ್ ಹೌಸ್, ಜಲ ಶುದ್ಧೀಕರಣ  ಘಟಕ, ಸಮತೋಲಿತ ಕೆರೆಗಳು, ಸರೋವರ, ಪ್ರಯೋಗಾಲಯ, ಕೈ ಪಂಪ್ ಇತ್ಯಾದಿಗಳನ್ನು ಸೆ.30ರೊಳಗೆ ಕಡ್ಡಾಯವಾಗಿ ಜಿಯೋ ಟ್ಯಾಗ್ ಮಾಡಲು ಸೂಚಿಸಿದ್ದಾರೆ.

ವಾರದಲ್ಲಿ 2 ದಿನ ಸಿಇಓಗಳ ಗ್ರಾಮ ಭೇಟಿ ಕಡ್ಡಾಯ:

ಉನ್ನತಾಧಿಕಾರಿಗಳು ಹಳ್ಳಿಗಳಿಗೆ ದಿಢೀರ್ ಭೇಟಿ ನೀಡಿ ಶುದ್ಧ ಕುಡಿಯುವ ನೀರು ಪೂರೈಕೆ, ಉತ್ತಮ ರಸ್ತೆ, ನೈರ್ಮಲ್ಯ, ಕೆರೆಗಳ ಸ್ಥಿತಿ ಇತ್ಯಾದಿ ಪರಾಮರ್ಶೆ ನಡೆಸಿದರೆ ಗ್ರಾಮಗಳ ಅಭಿವೃದ್ಧಿ ಆಗುತ್ತದೆ. ಅದೇ ರೀತಿ ವಿಬಿಜಿ ರಾಮ್ ಜಿ ಅಡಿ ನೀಡುತ್ತಿರುವ ಉದ್ಯೋಗ ಪರಿಶೀಲಿಸಿದರೆ ಬರಗಾಲದಲ್ಲಿ ಬಡವರಿಗೆ ಉದ್ಯೋಗವೂ ಲಭಿಸುತ್ತದೆ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಆಸ್ತಿಯ ಸೃಜನೆಯೂ ಆಗತ್ತದೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಓ) ವಾರದಲ್ಲಿ ಕನಿಷ್ಠ 2 ದಿನ 4-5 ಗ್ರಾಮಗಳಿಗೆ ಭೇಟಿ ನೀಡುವಂತೆ ಆದೇಶಿಸಿದ್ದು ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ಲಭಿಸಿದೆ.

ಕೌನ್ಸಲಿಂಗ್ ಮೂಲಕ ಪಾರದರ್ಶಕ ವರ್ಗಾವಣೆ:

ರಾಜ್ಯದ ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಇಲಾಖೆಯ 2026-27ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ 31 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್ – 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಂದ ಸ್ವೀಕೃತವಾಗಿದ್ದ 1,801 ವರ್ಗಾವಣೆ ಅರ್ಜಿಗಳನ್ನು ಪರಿಶೀಲಿಸಿ 1,229 ಅರ್ಹ ಸಿಬ್ಬಂದಿಗೆ ಆನ್ ಲೈನ್ ಮೂಲಕ ಕೌನ್ಸೆಲಿಂಗ್‌ ನಡೆಸಿ, ವರ್ಗಾವಣೆ ಆದೇಶಗಳನ್ನು ಸ್ಥಳದಲ್ಲೇ ನೀಡಿದ್ದಲ್ಲದೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೂತನವಾಗಿ ನೇಮಕಗೊಂಡ 13 ಸಹಾಯಕ ಅಭಿಯಂತರರು, 40 ಕಿರಿಯ ಅಭಿಯಂತರರು, ಕಲ್ಯಾಣ ಕರ್ನಾಟಕ ಭಾಗದ 76 ಪಿಡಿಓಗಳಿಗೆ, ಕಲ್ಯಾಣ ಕರ್ನಾಟಕೇತರ 526 ಮುಂಬಡ್ತಿ ಪಡೆದ ಪಿಡಿಓಗಳಿಗೆ ಕೌನ್ಸಲಿಂಗ್ ಮೂಲಕ ಸ್ಥಳ ನಿಯೋಜನೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 1400 ಹುದ್ದೆಗಳ ಭರ್ತಿಗೆ ಕ್ರಮವಹಿಸಿದ್ದಾರೆ.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಬರಬೇಕಾದ 2186.20 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಪಾವತಿಸದ ಹಿನ್ನೆಲೆಯಲ್ಲಿ ಎಲ್ಲ ಸಂಸತ್ ಸದಸ್ಯರಿಗೆ ಹಾಗೂ ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಸೇರಿದಂತೆ ಸಚಿವರಿಗೂ ಪತ್ರ ಬರೆದು ಒಕ್ಕೂಟ ವ್ಯವಸ್ಥೆಯ ಘನತೆ ಎತ್ತಿಹಿಡಿದಿದ್ದಾರೆ.

ಫಲವೃಕ್ಷೋದ್ಯಾನ:

ಪ್ರಕೃತಿ ಪರಿಸರದ ಬಗ್ಗೆ ಅಪಾರ ಕಾಳಜಿ ಇರುವ ಈಶ್ವರ ಖಂಡ್ರೆ, ಗ್ರಾಮೀಣ ಪ್ರದೇಶದಲ್ಲಿ ಪರಿಸರಕ್ಕೆ ಮಾರಕವಾದ ಪಿಓಪಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಅವಕಾಶ ನೀಡದಂತೆ ಸೂಚಿಸಿದ್ದಾರೆ. ಜೊತೆಗೆ ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಜಾಗ ಒತ್ತುವರಿ ಆಗದಂತೆ ತಡೆಯಲು ಮತ್ತು ಪಕ್ಷಿಗಳಿಗೆ ಆಹಾರವಾಗುವಂತಹ ಹಣ್ಣಿನ ಗಿಡ ನೆಟ್ಟು, ತೋಟ ಮಾಡಿ ಅದನ್ನು ಗ್ರಾಮೀಣ ಯುವಜನರಿಗೆ ವಾರ್ಷಿಕ ಹರಾಜಿನ ಮೂಲಕ ಗುತ್ತಿಗೆ ನೀಡಿದರೆ ಅದು ಜೀವನೋಪಾಯವನ್ನೂ ಕಲ್ಪಿಸುತ್ತದೆ. ಪ್ರಕೃತಿ ಪರಿಸರವನ್ನೂ ಕಾಪಾಡುತ್ತದೆ ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. 

ಗ್ರಾಮಭೇಟಿ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ತರುವಾಯ ಆನ್ ಲೈನ್ ಮೂಲಕ ಸಿಇಓಗಳೊಂದಿಗೆ ಸಭೆ ನಡೆಸುವದಷ್ಟೇ ಅಲ್ಲದೆ, ಮುಖ್ಯಕಾರ್ಯದರ್ಶಿಯವರ ಸಮ್ಮುಖದಲ್ಲೇ ಎಲ್ಲ ಸಿಇಓಗಳ ಸಭೆ ನಡೆಸಿ ಆಡಳಿತಕ್ಕೆ ಚುರುಕು ನೀಡಿದ್ದಾರೆ.

ಗ್ರಾ.ಪಂ., ತಾಪಂ, ಜಿ.ಪಂ.ಚುನಾವಣೆಗೂ ಸಿದ್ಧತೆ:

ಮಹಾತ್ಮಾಗಾಂಧೀ ಅವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ಸಂವಿಧಾನದ 73ನೇ ತಿದ್ದುಪಡಿಯೊಂದಿಗೆ ರಚನೆಯಾದ ಮೂರು ಹಂತದ ಪಂಚಾಯತಿ ವ್ಯವಸ್ಥೆ ರಾಜ್ಯದಲ್ಲಿದ್ದು, ಪ್ರಸ್ತುತ ಅವಧಿ ಮುಗಿದ ಎಲ್ಲ ಪಂಚಾಯತಿಗಳಿಗೆ ಚುನಾವಣೆ ನಡೆಸಲು ಈಶ್ವರ ಖಂಡ್ರೆ ಸಿದ್ಧತೆ ನಡೆಸಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ವಿವಿಧ ಗ್ರಾಮಗಳು ಪಟ್ಟಣ ಪಂಚಾಯತಿ, ನಗರಸಭೆ, ನಗರಪಾಲಿಕೆ ವ್ಯಾಪ್ತಿಗೆ ಬಂದಿರುವ ಹಾಗೂ ಕೆಲವು ಪಂಚಾಯತಿಗಳು ಮೇಲ್ದರ್ಜೆಗೇರಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿ, ಮೀಸಲಾತಿ ನಿಗದಿ ಮಾಡಿ ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಸುವುದಾಗಿ ಈಶ್ವರ ಖಂಡ್ರೆ ಘೋಷಿಸಿದ್ದಾರೆ.

ಒಟ್ಟಾರೆ ದಿನ 100 ತುಂಬವ ಹೊತ್ತಿಗೆ ಹತ್ತಾರು ಸ್ಮರಣಾರ್ಹ ಕಾರ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾಡಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others