ಲಕ್ನೋ: 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಮೂರು ಕಂತುಗಳಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಮುಂಬರುವ 2027ರ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚುನಾವಣಾ ಪೂರ್ವ ಭರವಸೆ ಘೋಷಿಸಿದ್ದಾರೆ. 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವಾಗಿ ತಿಳಿಸಿದ್ದಾರೆ.
ವಾರಾಣಸಿಯಲ್ಲಿ ನಡೆದ ‘ವರ್ಕಿಂಗ್ ವುಮೆನ್ಸ್ ಹಾನರ್ ಸಮಾರಂಭ’ದಲ್ಲಿ ಮಾತನಾಡಿದ ಅವರು, ಮೊದಲ ಕಂತಿನಲ್ಲಿ 20,000 ರೂ. ನೀಡಲಾಗುವುದು. ಮೊದಲ ಕಂತಿನಲ್ಲಿ ಸಾಲ ಪಡೆದ ಮಹಿಳೆಯರು ಕಾಲಕಾಲಕ್ಕೆ ಮರುಪಾವತಿ ಮಾಡಿದರೆ, ಆ ಮಹಿಳೆಯರು ಎರಡೇ ಕಂತಿನಲ್ಲಿ 30,000 ರೂ. ಸಾಲ ಪಡೆಯಲು ಅರ್ಹರಾಗುತ್ತಾರೆ. ಅದರಂತೆ ಎರಡೇ ಕಂತಿನ ಹಣ ಮರುಪಾವತಿ ಬಳಿಕ ಮೂರನೇ ಕಂತಿನಲ್ಲಿ 50,000 ರೂ. ಸಾಲ ಪಡೆಯಬಹುದು.
ಮಹಿಳೆಯರು ಸಣ್ಣ ಉದ್ಯಮ ಆರಂಭಿಸಲು, ಈಗಾಗಲೇ ನಡೆಸುತ್ತಿರುವ ಉದ್ಯಮವನ್ನು ವಿಸ್ತರಿಸಲು ಹಾಗೂ ಆದಾಯ ಹೆಚ್ಚಿಸುವ ಚಟುವಟಿಕೆಗಳಿಗೆ ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಇದರಿಂದ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ. ಕೃಷಿ, ಪಶುಸಂಗೋಪನೆ, ಆಹಾರ ಸಂಸ್ಕರಣೆ, ಸಣ್ಣ ವ್ಯಾಪಾರ, ಕರಕುಶಲ ಸೇರಿದಂತೆ ವಿವಿಧ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಅಗತ್ಯವಿರುವ ಆರಂಭಿಕ ಬಂಡವಾಳವನ್ನು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಬ್ಯಾಂಕ್ಗಳೊಂದಿಗೆ ಚರ್ಚೆ ನಡೆಸಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳು, ಖಾಸಗಿ ಬ್ಯಾಂಕ್ಗಳು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಹಿಳೆಯರಿಗೆ ಸುಲಭವಾಗಿ ಸಾಲ ಸೌಲಭ್ಯ ತಲುಪಿಸುವ ಕುರಿತು ಚರ್ಚಿಸಲಾಗಿದೆ.
ಮಹಿಳೆಯರು ಸ್ವಾವಲಂಬಿಗಳಾಗಲು ಅಗತ್ಯವಾದ ಬಂಡವಾಳದ ಕೊರತೆ ಎದುರಾಗಬಾರದು. ಮಹಿಳೆಯರ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಸರ್ಕಾರದ ಪ್ರಮುಖ ಆದ್ಯತೆ. ಹೀಗಾಗಿ ಉತ್ತರ ಪ್ರದೇಶ ಮಹಿಳಾ ಉದ್ಯಮಿ ಕ್ರೆಡಿಟ್ ಯೋಜನೆಯಡಿಯಲ್ಲಿ 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಮೂರು ಕಂತುಗಳಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಮೀಣ ಮಹಿಳೆಯರ ಆದಾಯವನ್ನು ಹೆಚ್ಚಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನದ ಭಾಗವಾಗಿ ಈ ಯೋಜನೆಯನ್ನು ತರಲಾಗುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಉದ್ಯಮಶೀಲರನ್ನಾಗಿ ರೂಪಿಸುವುದರೊಂದಿಗೆ ‘ಲಖಪತಿ ದೀದಿ’ ಗುರಿಗೂ ಯೋಜನೆ ನೆರವಾಗಲಿದೆ ಎಂದು ಸರ್ಕಾರದ ಮೂಲಗಳಿಂದ ಮಾಹಿತಿ ಬೆಳಕಿಗೆ ಬಂದಿಂದೆ.





