ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಕೊಡುಗೆ ಶೂನ್ಯವಾಗಿದೆ. ರಾಷ್ಟ್ರಗೀತೆ ವಂದೇ ಮಾತರಂ ಗಾಯನ ಹಾಗೂ ಭಾರತದ ವಿದೇಶಾಂಗ ನೀತಿಯ ವೈಫಲ್ಯಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಂದೇ ಮಾತರಂ ಗೀತೆಯ 2 ಚರಣಗಳನ್ನು ಮಾತ್ರ ಹಾಡಲು ಕರ್ನಾಟಕ ಸರ್ಕಾರದ ನಿರ್ಧಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಳೆದ 10 ವರ್ಷಗಳಿಂದ ಹಾಗೂ ಈ ಹಿಂದೆ ವಾಜಪೇಯಿ ಅವರ ಕಾಲದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ಈ ನಿಯಮ ಬದಲಾಯಿಸಲು ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಕೊಡುಗೆ ಶೂನ್ಯ. ನೇತಾಜಿ ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಸೇನೆ ಕಟ್ಟುತ್ತಿದ್ದ ಸಂದರ್ಭದಲ್ಲಿ ಆರ್ಎಸ್ಎಸ್ ಹಾಗೂ ಸಾವರ್ಕರ್ ಬ್ರಿಟಿಷ್ ಸೇನೆಗೆ ಜನರನ್ನು ಸೇರಿಸುತ್ತಿದ್ದರು ಎಂದರು.
ಬ್ರಿಕ್ಸ್ ಶೃಂಗಸಭೆ ಹಾಗೂ ಚೀನಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಮೋದಿಯವರು ಈ ಹಿಂದೆ ಚೀನಾ ಅಧ್ಯಕ್ಷರ ಜೊತೆ ಗುಜರಾತ್ನಲ್ಲಿ ಜೋಕಾಲಿ ಆಡಿದರು, ಮಹಾಬಲಿಪುರಂನಲ್ಲಿ ಮಾತುಕತೆ ನಡೆಸಿದರು. ಆದರೆ ಇಂದು ಚೀನಾ ಅರುಣಾಚಲ ಪ್ರದೇಶವನ್ನು ಕಬಳಿಸುತ್ತಿದೆ, ಭಾರತದ ಗಡಿಯೊಳಗೆ ಗ್ರಾಮಗಳನ್ನು ನಿರ್ಮಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ವಿದೇಶಾಂಗ ಸಚಿವರೇ ‘ದೊಡ್ಡ ಆರ್ಥಿಕತೆ ಜೊತೆ ಜಗಳವಾಡಲು ಸಾಧ್ಯವೇ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಮೋದಿಯವರ 56 ಇಂಚಿನ ಎದೆಗಾರಿಕೆ ಕೇವಲ ಕಾಂಗ್ರೆಸ್ ಪಕ್ಷದ ವಿರುದ್ಧ ತೋರಿಸುವುದಕ್ಕಷ್ಟೇ ಸೀಮಿತವೇ? ದೇಶದ ಶತ್ರುಗಳ ಮುಂದೆ ಆ ಶಕ್ತಿ ಏಕೆ ಕಾಣಿಸುವುದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
ಇವರಿಗಿಂತ ದೊಡ್ಡವರು ಬಿಜೆಪಿಯವರಾ ಬ್ರಿಟಿಷರಿಂದ 60 ರೂಪಾಯಿ ಪಿಂಚಣಿ ಪಡೆಯುತ್ತಿದ್ದವರಿಂದ ಇಂದು ನಾವು ದೇಶಭಕ್ತಿಯ ಪಾಠ ಕಲಿಯಬೇಕಾಗಿಲ್ಲ. 1937ರಲ್ಲೇ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಹಾಗೂ ರವೀಂದ್ರನಾಥ ಟ್ಯಾಗೋರ್ ಸೇರಿದಂತೆ 8 ಜನ ರಾಷ್ಟ್ರನಾಯಕರು ಸಭೆ ಸೇರಿ ಎರಡು ಚರಣಗಳನ್ನು ಹಾಡಲು ನಿರ್ಧರಿಸಿದ್ದರು ಎಂದು ಹೇಳಿದ್ದಾರೆ.





