ಯುದ್ಧ ಮತ್ತಷ್ಟು ಭೀಕರಗೊಳಿಸುವ ಸುಳಿವು: ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಗುರಿ

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾದ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತಷ್ಟು ಕಠಿಣ ನಿಲುವು ತಳೆದಿದ್ದಾರೆ.

ಎಂಟು ತಿಂಗಳಿಂದ ಮುಂದುವರಿದಿರುವ ಇರಾನ್ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವ ಸುಳಿವು ನೀಡಿರುವ ಅವರು, ಅಗತ್ಯಬಿದ್ದರೆ ಇರಾನ್‌ನ ಉಳಿದ ಭಾಗವನ್ನೂ ನಾಶಪಡಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಸಾಧ್ಯವಾದರೆ ಇರಾನ್‌ನ ಉಳಿದ ಭಾಗವನ್ನು ನಾಶಪಡಿಸಲು ನಾನು ಬಯಸುವುದಿಲ್ಲ. ಆದರೆ, ಬಹುಶಃ ಅನಿವಾರ್ಯವಾಗಿ ಹಾಗೆ ಮಾಡಬೇಕಾಗಬಹುದು. ಏನಾಗಲಿದೆ ಎಂಬುದು ನಿಮಗೆ ಶೀಘ್ರದಲ್ಲೇ ತಿಳಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾತನಾಡಿ, “ನಮ್ಮ ಅನುಮತಿಯಿಲ್ಲದೆ ಅವರು ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಎಂಟು ತಿಂಗಳಿಂದ ಮುಂದುವರಿದಿರುವ ಇರಾನ್ ಯುದ್ಧದ ವಿಚಾರದಲ್ಲಿ ಟ್ರಂಪ್ ಆಡಳಿತದ ಮೇಲೆ ಒತ್ತಡ ಹೆಚ್ಚುತ್ತಿದೆ. ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಹಿನ್ನಡೆಗೆ ಇರಾನ್ ಸಂಘರ್ಷದ ಬಗೆಗಿನ ಮತದಾರರ ಅಸಮಾಧಾನ ಮತ್ತು ಏರುತ್ತಿರುವ ಇಂಧನ ಬೆಲೆಗಳು ಪ್ರಮುಖ ಕಾರಣಗಳಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದೇ ವೇಳೆ, ಅಮೆರಿಕದ ಅನುಮತಿಯಿಲ್ಲದೆ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ಚುನಾವಣೆಗೂ ಮುನ್ನ, ವಾಷಿಂಗ್ಟನ್‌ಗೆ ಒಪ್ಪಿಗೆಯಾಗುವ ಒಪ್ಪಂದಕ್ಕೆ ಟೆಹ್ರಾನ್ ಸಮ್ಮತಿಸದಿದ್ದರೆ ಇರಾನ್ ವಿರುದ್ಧ ಮತ್ತೆ ದೊಡ್ಡ ಪ್ರಮಾಣದ ದಾಳಿ ನಡೆಸುವುದಾಗಿ ಟ್ರಂಪ್ ಹಲವು ಬಾರಿ ಬೆದರಿಕೆ ಹಾಕಿದ್ದರು.

ಇದೇ ವೇಳೆ, ಇರಾನ್‌ಗೆ ಸೀಮಿತವಾಗಿದ್ದ ಸಂಘರ್ಷದ ಪರಿಣಾಮಗಳು ಇತರ ಪ್ರದೇಶಗಳಿಗೂ ವಿಸ್ತರಿಸಿವೆ. ಯೆಮೆನ್‌ನ ಹೌತಿ ಬಂಡುಕೋರರ ದಾಳಿಗಳು ಹಾಗೂ ಪ್ರಾದೇಶಿಕ ಪಡೆಗಳ ಪ್ರತಿದಾಳಿಗಳಿಂದ ಕೆಂಪು ಸಮುದ್ರ ಪ್ರದೇಶದಲ್ಲೂ ಉದ್ವಿಗ್ನತೆ ಹೆಚ್ಚಾಗಿದೆ.

ಆದರೆ, ಮಾತುಕತೆ ಮುಂದುವರಿಯಬೇಕಾದರೆ ಅಮೆರಿಕ ತನ್ನ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಟೆಹ್ರಾನ್ ಪಟ್ಟು ಹಿಡಿದಿದೆ.

ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವುದು, ಸ್ಥಗಿತಗೊಂಡಿರುವ ಇರಾನ್‌ನ ಆಸ್ತಿಗಳನ್ನು ಬಿಡುಗಡೆ ಮಾಡುವುದು ಹಾಗೂ ಯುದ್ಧದಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಇರಾನ್ ಮುಂದಿಟ್ಟಿದೆ.

ಇತ್ತೀಚಿನ ಬೆಳವಣಿಗೆಗಳು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಅಂತರ ಹೆಚ್ಚುತ್ತಿರುವುದನ್ನು ಸೂಚಿಸುತ್ತಿವೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಹೊಸ ಪ್ರಸ್ತಾವನೆಯನ್ನು ಕತಾರ್ ಮೂಲಕ ಅಮೆರಿಕಕ್ಕೆ ಕಳುಹಿಸಿದೆ ಎನ್ನಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others