ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಅದರಷ್ಟು ಅದೃಷ್ಟ ಎಲ್ಲಿಯೂ ಸಿಗುವುದಿಲ್ಲ ಕಾರಣ ಹೆಣ್ಣು ಮಕ್ಕಳು ಮನೆಗೆ ಶಾಂತಿ ಮತ್ತು ಹಬ್ಬಕ್ಕೆ ಪ್ರಮುಖ ಪಾತ್ರ ಹೆಣ್ಣು ಮಕ್ಕಳದ್ದೇ ಆಗಿರುತ್ತದೆ. ಹೆಚ್ಚಾಗಿ ಗೌರಿ ಹಬ್ಬವನ್ನು ಕರ್ನಾಟಕದಾದ್ಯಂತ ಅದ್ದೂರಿಯಾಗಿ ಆಚರಿಸಲಾಗುವಂತಹ ಹಬ್ಬವಾಗಿದೆ.
ಗೌರಿ ಹಬ್ಬವು ಗಣೇಶ ಚತುರ್ಥಿಯೊಂದಿಗೆ ಸಂಬಂಧವನ್ನು ಹೊಂದಿರುವ ಹಬ್ಬವಾಗಿದೆ. ಗೌರಿ ಹಬ್ಬವು ಪಾರ್ವತಿ ದೇವಿಗೆ ಸಮರ್ಪಿತವಾದ ಗೌರಿ ದೇವಿಯ ರೂಪವನ್ನು ಪೂಜಿಸುವಂತಹ ದಿನವಾಗಿದೆ.
ಮಹಿಳೆಯರು ಸುಖಮಯ ದಾಂಪತ್ಯ ಜೀವನಕ್ಕಾಗಿ ಗೌರಿ ದೇವಿಯ ಆಶೀರ್ವಾದವನ್ನು ಪಡೆಯಲು ‘ಸ್ವರ್ಣ ಗೌರಿ ವ್ರತ’ವನ್ನು ಆಚರಿಸುತ್ತಾರೆ.ಗೌರಿ ಹಬ್ಬದಂದು ಪಾರ್ವತಿ ದೇವಿಯ ಅವತಾರವಾದ ಗೌರಿ ದೇವಿಯನ್ನು ಪೂಜಿಸಲಾಗುತ್ತದೆ.
ಗಣೇಶ ಚತುರ್ಥಿಯಂದು ಗಣೇಶನನ್ನು ಪೂಜಿಸುವುದಕ್ಕೂ ಮುನ್ನ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಮಹಿಳೆಯರಿಗೆ ಮುಖ್ಯವಾದ ಈ ಗೌರಿ ಪೂಜೆಯು ಕೌಟುಂಬಿಕ ಸಂತೋಷವನ್ನು, ಸಾಮರಸ್ಯವನ್ನು, ಶಾಂತಿಯನ್ನು ತಂದುಕೊಡುವುದು ಎನ್ನುವ ನಂಬಿಕೆಯಿದೆ.
ಗೌರಿ ಹಬ್ಬದ ಮಹತ್ವ : ಗಣೇಶನ ತಾಯಿಯಾದ ತಾಯಿ ಗೌರಿಯನ್ನು (ಪಾರ್ವತಿ) ಸ್ಮರಿಸಿ, ಪೂಜಿಸುವ ವಿಶೇಷ ಹಬ್ಬ ಇದಾಗಿದೆ.ತಾಯಿ ಗೌರಿಯು ತವರುಮನೆಗೆ ಬಂದ ಮಗಳಂತೆ ಭಕ್ತರ ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆಯಿದ್ದು, ಮರುದಿನ ಗಣೇಶನು ತಾಯಿಯನ್ನು ಕರಡೊಯ್ಯಲು ಬರುತ್ತಾನೆ ಎಂಬ ಪ್ರತೀತಿಯಿದೆ.
ಬಾಗಿನ ಅರ್ಪಣೆ: ಅರಿಶಿನ, ಕುಂಕುಮ, ಬಳೆ, ಬಟ್ಟೆ, ಧಾನ್ಯಗಳು ಹಾಗೂ ಇನ್ನಿತರ ಮಂಗಲ ದ್ರವ್ಯಗಳನ್ನು ಬಾಗಿನವಾಗಿ ಸಿದ್ಧಪಡಿಸಿ ಪಾರ್ವತಿಗೆ ಅರ್ಪಿಸಲಾಗುತ್ತದೆ.
ಪುರಾಣಗಳ ಪ್ರಕಾರ, ಸ್ವರ್ಣಗೌರಿಯು (ಪಾರ್ವತಿ) ಭಾದ್ರಪದ ಶುದ್ಧ ತದಿಗೆಯ ದಿನದಂದು ತನ್ನ ತವರು ಮನೆಗೆ (ಭೂಲೋಕಕ್ಕೆ) ಭೇಟಿ ನೀಡುತ್ತಾಳೆ. ಮಗಳ ಸತ್ಕಾರಕ್ಕಾಗಿ ಭಕ್ತರು ಅವಳನ್ನು ಅತ್ಯಂತ ಪ್ರೀತಿಯಿಂದ ಪೂಜಿಸುತ್ತಾರೆ.ತವರು ಮನೆಗೆ ಬಂದ ತಾಯಿ ಗೌರಿಯನ್ನು ಮರುದಿನ ಗಣೇಶನು ಶಿವಲೋಕಕ್ಕೆ ಕರೆದೊಯ್ಯಲು ಬರುತ್ತಾನೆ ಎಂಬುದು ಭಕ್ತರ ನಂಬಿಕೆ
ಇತಿಹಾಸದ ಪ್ರಕಾರ ಶಾತವಾಹನರು, ಚಾಲುಕ್ಯರು ಮತ್ತು ರಾಷ್ಟ್ರಕೂಟರ ಕಾಲದಲ್ಲೂ ಗಣೇಶಾರಾಧನೆ ಇತ್ತು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಈ ಹಬ್ಬವನ್ನು ರಾಜವಂಶಸ್ಥರು ಅತ್ಯಂತ ವೈಭವದಿಂದ ಆಚರಿಸುತ್ತಿದ್ದರು.
ಇನ್ನು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಿಲಿಕಾನ್ ಸಿಟಿಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಹಿನ್ನೆಲೆ ಹೂವು, ಹಣ್ಣು, ತರಕಾರಿ, ದಿನಸಿ ಹಾಗೂ ಇತರೆ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಕ್ಕಿಂತ ಹೂವು, ತೋರಣಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.





