ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ (DAR) ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಮುಂಜಾನೆ ಸಂಭವಿಸಿದ ತೀವ್ರ ಹೃದಯಾಘಾತದಿಂದ ಅಕಾಲಿಕವಾಗಿ ಕೊನೆಯುಸಿರೆಳೆದಿದ್ದಾರೆ.
ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಬಡಾವಣೆ ನಿವಾಸಿ ಐರಾಜು (40) ಮೃತ ದುರ್ದೈವಿ. ಕರ್ತವ್ಯನಿಷ್ಠ ಅಧಿಕಾರಿಯೊಬ್ಬರು ಅತಿ ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದು ಪೊಲೀಸ್ ಇಲಾಖೆ ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ.
ಕರ್ತವ್ಯ ಮುಗಿಸಿ ಬಂದ ಬೆನ್ನಲ್ಲೇ ದುರಂತ:
ನಿನ್ನೆ ರಾತ್ರಿಯ ಪಾಳಿ ಕರ್ತವ್ಯವನ್ನು ಅಚ್ಚುಕಟ್ಟಾಗಿ ಪೂರೈಸಿದ್ದ ಐರಾಜು, ಎಂದಿನಂತೆ ಚಿಂತಾಮಣಿಯ ತಮ್ಮ ಮನೆಗೆ ಮರಳಿದ್ದರು. ಆದರೆ ಮುಂಜಾನೆ ಸುಮಾರು 5:30ರ ಸುಮಾರಿಗೆ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಯುವ ಪೇದೆಯ ಸಾವಿನಿಂದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಐರಾಜು ಅವರ ಅಕಾಲಿಕ ನಿಧನಕ್ಕೆ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಹಾಗೂ ಚಿಂತಾಮಣಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಸಹೋದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.





