ಮುಂಬೈ: ಸರ್ಜಿಕಲ್ ಸ್ಟ್ರೈಕ್, ಏರ್ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆ ವಿರುದ್ಧ `ಶೂನ್ಯ ಸಹಿಷ್ಣುತೆ’ ನೀತಿಯನ್ನು ದೇಶ ತೋರಿಸಿದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮುಂಬೈನಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್ಡಿಎ ಆಡಳಿತದಲ್ಲಿರುವ 21 ರಾಜ್ಯಗಳಲ್ಲೂ 2029ರೊಳಗೆ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸರ್ಕಾರದ ಭದ್ರತಾ ನೀತಿಯನ್ನೂ ಅಮಿತ್ ಶಾ ಇದೇ ವೇಳೆ ಪ್ರಸ್ತಾಪಿಸಿದರು. ಸರ್ಜಿಕಲ್ ಸ್ಟ್ರೈಕ್, ಏರ್ಸ್ಟ್ರೈಕ್ ಮತ್ತು ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆ ವಿರುದ್ಧ `ಶೂನ್ಯ ಸಹಿಷ್ಣುತೆ’ ನೀತಿಯನ್ನು ದೇಶ ತೋರಿಸಿದೆ ಎಂದು ಹೇಳಿದರು.
2014ಕ್ಕೂ ಮುನ್ನ ಭಾರತದಲ್ಲಿ ಭ್ರಷ್ಟಾಚಾರ, ಜಾತೀಯತೆ ಮತ್ತು ಕುಟುಂಬ ರಾಜಕಾರಣ ಪ್ರಮುಖವಾಗಿದ್ದವು ಎಂದು ಆರೋಪಿಸಿದ ಶಾ, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ `ಕಾರ್ಯಕ್ಷಮತೆ ಆಧಾರಿತ ರಾಜಕಾರಣ’ಕ್ಕೆ ಆದ್ಯತೆ ನೀಡಲಾಗಿದೆ ಎಂದು ನುಡಿದರು.
ಮಣಿಪುರ ವಿಧಾನಸಭೆ ಚುನಾವಣೆಗೂ ಮುನ್ನ 1951ರ ಆಧಾರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಜಾರಿಯಾಗಲಿದೆಯೇ ಎಂಬ ಪ್ರಶ್ನೆಗೆ ಶಾ ಉತ್ತರಿಸಿದರು. ಮಣಿಪುರದಲ್ಲಿರುವ ಸಹೋದ್ಯೋಗಿಗಳು ಮತ್ತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಈ ಕುರಿತು ಚರ್ಚೆ ನಡೆಯುತ್ತಿದೆ. ಯಾವುದೇ ನಿರ್ಧಾರ ಕೈಗೊಂಡ ಕೂಡಲೇ ಅದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಆರ್ಟಿಕಲ್ 370, ನಕ್ಸಲಿಸಂ ಮತ್ತು ಈಶಾನ್ಯ ರಾಜ್ಯಗಳ ಪರಿಸ್ಥಿತಿಯನ್ನೂ ಅಮಿತ್ ಶಾ ಪ್ರಸ್ತಾಪಿಸಿದರು. ಹಲವು ದಶಕಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ಸಮಸ್ಯೆಗಳನ್ನು ಸರ್ಕಾರ ಎದುರಿಸಿದೆ ಎಂದು ಹೇಳಿದರು.
ಭಾರತದ ವಿದೇಶಾಂಗ ಮತ್ತು ರಕ್ಷಣಾ ನೀತಿಗಳಿಗೆ ಈಗ ಬಲವಾದ ಬೆನ್ನೆಲುಬು ಸಿಕ್ಕಿದೆ. ಭಾರತ ಫಸ್ಟ್’ ಎಂಬ ನೀತಿಯೇ ಸರ್ಕಾರದ ಕಾರ್ಯವೈಖರಿಗೆ ಮಾರ್ಗದರ್ಶಿಯಾಗಿದೆ. ದೇಶದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಒಂದು ಕಾಲದಲ್ಲಿಫ್ರಾಜೈಲ್ ಫೈವ್’ ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ ಇದೀಗ ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಜಿಡಿಪಿ ಬೆಳವಣಿಗೆ ದಾಖಲಾಗಿದ್ದು, ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದರು.
ಮದುವೆ, ವಿಚ್ಛೇದನ, ಆಸ್ತಿ ಹಕ್ಕು, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರ ಸೇರಿದಂತೆ ವೈಯಕ್ತಿಕ ಕಾನೂನುಗಳಿಗೆ ಧರ್ಮಭೇದವಿಲ್ಲದೆ ಒಂದೇ ರೀತಿಯ ಕಾನೂನು ರೂಪಿಸುವ ಉದ್ದೇಶವನ್ನು ಏಕರೂಪ ನಾಗರಿಕ ಸಂಹಿತೆ ಹೊಂದಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗಿದೆ ಎಂದರು.





