ನವದೆಹಲಿ: ಅಡುಗೆಮನೆಯ ದಿನನಿತ್ಯದ ಅಗತ್ಯ ವಸ್ತುಗಳು ಹಾಗೂ ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಸತತ ಮೂರನೇ ತಿಂಗಳೂ ಮೇಲ್ಮುಖ ಚಲನೆ ಮುಂದುವರಿಸಿದೆ. ಜುಲೈ ತಿಂಗಳಲ್ಲಿದ್ದ ಶೇಕಡಾ 4.45 ರ ಮಟ್ಟದಿಂದ ಆಗಸ್ಟ್ ತಿಂಗಳ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಹಣದುಬ್ಬರವು ಶೇಕಡಾ 4.82ಕ್ಕೆ ಜಿಗಿದಿದೆ ಎಂದು ಕೇಂದ್ರ ಸಾಂಖ್ಯಿಕ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಿದೆ.
ಪಟ್ಟಣಗಳಿಗಿಂತ ಹಳ್ಳಿಗಳಲ್ಲೇ ಬೆಲೆ ಏರಿಕೆಯ ಹೊಡೆತ ಹೆಚ್ಚಾಗಿದ್ದು, ಗ್ರಾಮೀಣ ಭಾಗದ ಹಣದುಬ್ಬರ ಶೇ. 4.84 ರಿಂದ ಶೇ. 5.23 ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ಈ ಪ್ರಮಾಣ ಶೇ. 3.96 ರಿಂದ ಶೇ. 4.31 ಕ್ಕೆ ವಿಸ್ತರಿಸಿದೆ.
ಕಣ್ಣೀರು ತರಿಸಿದ ಈರುಳ್ಳಿ-ಬೆಳ್ಳುಳ್ಳಿ: ಆಭರಣಗಳಿಗೂ ಮುಟ್ಟದ ಬೆಲೆ
ಆಹಾರ ಹಣದುಬ್ಬರ ಪ್ರಮಾಣ ಶೇ. 5.52 ರಿಂದ ಶೇ. 5.95ಕ್ಕೆ ಏರಿಕೆಯಾಗಿದ್ದು, ಜನಸಾಮಾನ್ಯರ ಮಾಸಿಕ ಬಜೆಟ್ಗೆ ನೇರ ಪೆಟ್ಟು ನೀಡಿದೆ. ಪ್ರಮುಖವಾಗಿ ಈರುಳ್ಳಿ ಬೆಲೆ ಶೇ. 48.27ರಷ್ಟು ದುಬಾರಿಯಾಗಿದ್ದರೆ, ಬೆಳ್ಳುಳ್ಳಿ ಶೇ. 43.60 ಹಾಗೂ ಶುಂಠಿ ಶೇ. 73.82ರಷ್ಟು ದರ ಏರಿಕೆಯನ್ನು ದಾಖಲಿಸಿವೆ. ಆದರೆ, ಟೊಮೆಟೊ (ಶೇ. -31.09) ಮತ್ತು ಆಲೂಗಡ್ಡೆ (ಶೇ. -13.14) ಬೆಲೆಗಳು ಕಳೆದ ವರ್ಷಕ್ಕಿಂತ ಅಗ್ಗವಾಗಿರುವುದು ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಇತ್ತ ಲೋಹ ಮಾರುಕಟ್ಟೆಯಲ್ಲಿ ಬೆಳ್ಳಿ ಆಭರಣಗಳ ಬೆಲೆ ಬರೋಬ್ಬರಿ ಶೇ. 107.11ರಷ್ಟು ದಾಖಲೆಯ ಜಿಗಿತ ಕಂಡಿದ್ದು, ಚಿನ್ನ-ಪ್ಲಾಟಿನಂ ಆಭರಣಗಳು ಶೇ. 35.53ರಷ್ಟು ಏರಿಕೆ ಕಂಡಿವೆ.
ಹೋಟೆಲ್, ಸಾರಿಗೆ ವೆಚ್ಚದಲ್ಲೂ ಏರಿಕೆ
ವೈಯಕ್ತಿಕ ಆರೈಕೆ ಹಾಗೂ ಇತರೆ ಸೇವಾ ವಿಭಾಗಗಳಲ್ಲಿ ಶೇ. 15.17ರಷ್ಟು ಭಾರಿ ಹಣದುಬ್ಬರ ದಾಖಲಾಗಿದೆ. ಇದರೊಂದಿಗೆ ಹೋಟೆಲ್ ಊಟ ಮತ್ತು ವಾಸ್ತವ್ಯದ ದರಗಳು ಶೇ. 8.38, ಸರಕು ಸಾಗಣೆ ವೆಚ್ಚ ಶೇ. 14.64 ಹಾಗೂ ಬಟ್ಟೆ-ಪಾದರಕ್ಷೆಗಳು ಶೇ. 3.56ರಷ್ಟು ದುಬಾರಿಯಾಗಿವೆ.
ರಾಜ್ಯಗಳ ಪೈಕಿ ತೆಲಂಗಾಣಕ್ಕೆ ಅಗ್ರಸ್ಥಾನ
ದೇಶದ ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ಗರಿಷ್ಠ ಶೇ. 6.27 ರಷ್ಟು ಹಣದುಬ್ಬರ ವರದಿಯಾಗಿದ್ದು, ತಮಿಳುನಾಡು (ಶೇ. 5.92), ಮಧ್ಯಪ್ರದೇಶ (ಶೇ. 5.55) ಹಾಗೂ ಆಂಧ್ರಪ್ರದೇಶದಲ್ಲಿ (ಶೇ. 5.53) ಸರಕುಗಳ ಬೆಲೆ ಗಣನೀಯವಾಗಿ ಏರಿದೆ. ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನಿಷ್ಠ ಶೇ. 2.61 ರಷ್ಟು ಹಣದುಬ್ಬರ ದಾಖಲಾಗಿದೆ.
ಮೇ ತಿಂಗಳಲ್ಲಿ ಶೇ. 3.93 ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಜೂನ್ ಮತ್ತು ಜುಲೈ ತಿಂಗಳಲ್ಲೂ ಏರಿಕೆಯಾಗಿ, ಈಗ ಆಗಸ್ಟ್ನಲ್ಲಿ ಶೇ. 4.82ಕ್ಕೆ ಮುಟ್ಟಿದೆ. ಮುಂದಿನ ಸೆಪ್ಟೆಂಬರ್ ತಿಂಗಳ ಅಧಿಕೃತ ಹಣದುಬ್ಬರದ ವರದಿಯನ್ನು ಅಕ್ಟೋಬರ್ 12 ರಂದು ಕೇಂದ್ರ ಸರ್ಕಾರ ಪ್ರಕಟಿಸಲಿದೆ.





