ಕನಕಪುರ: ರಾಜ್ಯದಲ್ಲಿ ಬರ ಆವರಿಸಿದ್ದರೂ ಬಿಜೆಪಿಯವರಿಗೆ ರಾಜಕಾರಣವೇ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕನಕಪುರದಲ್ಲಿ ಮಾತನಾಡಿದ ಅವರು, ಸದನದಲ್ಲಿ ಬರದ ಕುರಿತು ಚರ್ಚೆಯನ್ನೇ ಮಾಡಲಿಲ್ಲ. ಈ ಬಗ್ಗೆ ಬಿಜೆಪಿ ಶಾಸಕರೂ ನನ್ನ ಬಳಿ ಬಂದು ನೋವು ತೋಡಿಕೊಂಡರು ಎಂದು ಹೇಳಿದರು.
ನಮ್ಮ ಕ್ಷೇತ್ರವನ್ನು ಬರ ಪಟ್ಟಿಯಿಂದ ಬಿಟ್ಟಿದ್ದಾರೆ ಅಂತ ಯಾವ ಶಾಸಕರೂ ಆತಂಕಪಡಬೇಕಿಲ್ಲ. ಬಿಜೆಪಿಯವರು ಈ ನಡವಳಿಕೆ ಕಾರಣಕ್ಕಾಗಿಯೇ ರೈತರ ಸಮಸ್ಯೆ ಮತ್ತು ಅವರ ಬದುಕಿನ ಬಗ್ಗೆ ಚರ್ಚೆ ಮಾಡಲು ಮೂರು ದಿನ ವಿಶೇಷ ಅಧಿವೇಶನ ಕರೆದಿದ್ದೇವೆ. ಕೇವಲ ಬರದ ವಿಚಾರ ಮಾತ್ರ ಚರ್ಚೆ ಮಾಡುತ್ತೇವೆ ಎಂದರು.
ಎಲ್ಲಿ ವಿದ್ಯುತ್ ಉತ್ಪಾದನೆ ಮಾಡಿದ್ರೂ ಇಲ್ಲಿಗೆ ತರಬಹುದು. ಅದಕ್ಕೂ ಟ್ರಾನ್ಸ್ಮಿಷನ್ ಕಾಸ್ಟ್ ಆಗುತ್ತಿದೆ, ಅದರ ಬಗ್ಗೆ ಚಿಂತೆ ಇಲ್ಲ. ನೀರು ಮತ್ತು ವಿದ್ಯುತ್ ಶಕ್ತಿ ಇಲ್ಲದೇ ನಾವು ಬದುಕೋದಕ್ಕೆ ಆಗಲ್ಲ. ಹಾಗಾಗಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿನ ನಮ್ಮ ಸರ್ಕಾರ ಹೊಸ ಮಾದರಿಗಳನ್ನು ಮಾಡಿದೆ. ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆ ನಿಂತಿತ್ತು. ಅದನ್ನೂ ಕೂಡ ನಾವು ಸೇರಿಸಿದ್ದೇವೆ. ಈಗ ಒನ್ ನೇಷನ್ ಒನ್ ಗ್ರಿಡ್ ಅಂತ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಹೂಡಿಕೆದಾರರು ಬರುತ್ತಿದ್ದಾರೆ. ಎಲ್ಲರೂ ಕರ್ನಾಟಕದ ನೋಡುತ್ತಿದ್ದಾರೆ. ನೀರು, ವಿದ್ಯುತ್ ಶಕ್ತಿ, ಭೂಮಿ ಕೊಡಿ ಅಂತ ಬೇಡಿಕೆ ಇದೆ. ಈಗ ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಈ ವರ್ಷ ಭೀಕರವಾದ ಬರಗಾಲ ಇದೆ. ನಾನು ಕೂಡಾ ಅನೇಕ ಕಡೆ ಭೇಟಿ ನೀಡಿದ್ದೇನೆ. ಸುಮಾರು 200ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಆವರಿಸಿದೆ. ಈ ವರ್ಷ ಅಂತರ್ಜಲವೂ ಬಹಳ ಕುಸಿದಿದೆ. ಬೆಳೆಗಳು ನಾಶವಾಗಿವೆ. ವಿದ್ಯುತ್ಗೂ ಬಹಳ ಅಭಾವ ಉಂಟಾಗುವ ಲಕ್ಷಣಗಳು ಕಾಣುತ್ತಿದ್ದು, ಖರೀದಿ ಮಾಡೋ ಅನಿವಾರ್ಯತೆ ಎದುರಾಗಿದೆ. ಅಕ್ಕಪಕ್ಕದ ರಾಜ್ಯಗಳ ಜೊತೆ ಮಾತನಾಡುವುದಕ್ಕೆ ಸಚಿವರಿಗೆ ಹೇಳಿದ್ದೇನೆ ಎಂದು ಹೇಳಿದ್ದಾರೆ.
ಖಾಸಗಿಯವರಿಗೂ ಶಕ್ತಿ ತುಂಬಲಿಲ್ಲ. ಈಗ ಕೆ.ಜೆ. ಜಾರ್ಜ್ ಅವರು ಬಂದ ಮೇಲೆ ಅನೇಕ ಯೋಜನೆಗಳನ್ನು ತೆಗೆದುಕೊಂಡಿದ್ದಾರೆ ಹಿಂದೆ ನನ್ನ ಕಾಲದಲ್ಲಿ ಬೇಕಾದಷ್ಟು ವಿದ್ಯುತ್ ಶಕ್ತಿ ಉತ್ಪಾದನೆ ಮಾಡಿದ್ದೇವೆ. ಯಾವ ಸಂದರ್ಭದಲ್ಲೂ ಲೋಡ್ ಶೆಡ್ಡಿಂಗ್ ಬಂದಿಲ್ಲ. ಬಿಜೆಪಿ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಆಗಲಿಲ್ಲ ಎಂದರು.





