ನವದೆಹಲಿ: ಮೊದಲು ಶಿವಸೇನೆ, ನಂತರ ಎನ್ಸಿಪಿ, ಈಗ ತೃಣಮೂಲ ಕಾಂಗ್ರೆಸ್. ಪ್ರತಿಬಾರಿಯೂ ಒಂದೇ ಮಾದರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಅದರ ಅಧಿಕೃತ ಚಿಹ್ನೆಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಮೊದಲು ಶಿವಸೇನೆ, ನಂತರ ಎನ್ಸಿಪಿ, ಈಗ ತೃಣಮೂಲ ಕಾಂಗ್ರೆಸ್. ಪ್ರತಿಬಾರಿಯೂ ಒಂದೇ ಮಾದರಿ — ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ಪಕ್ಷವನ್ನು ವಿಭಜಿಸುತ್ತವೆ. ಬಳಿಕ ಅದರ ಚುನಾವಣಾ ಚಿಹ್ನೆಯನ್ನು ಕಸಿದುಕೊಳ್ಳಲಾಗುತ್ತದೆ.
ಒಂದು ಸಂಪೂರ್ಣ ರಾಜಕೀಯ ಪಕ್ಷವನ್ನೇ ‘ಕದ್ದುಕೊಳ್ಳಲು’ ಸಾಧ್ಯವಾದರೆ, ಕೋಟ್ಯಂತರ ಭಾರತೀಯರ ಮತಗಳನ್ನೂ ‘ಕದಿಯಬಹುದು’ ಎಂಬುದರಲ್ಲಿ ಅಚ್ಚರಿಯೇನಿಲ್ಲ. ಮತ ಕಳ್ಳತನ. ಸರ್ಕಾರ ಕಳ್ಳತನ. ಈಗ ಪಕ್ಷ ಕಳ್ಳತನ ಇವು ನಮ್ಮ ಪ್ರಜಾಪ್ರಭುತ್ವದ ಅವನತಿಯ ಸಂಕೇತಗಳಾಗಿವೆ ಎಂದು ಹೇಳಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಂದು ರಾಜಕೀಯ ಪಕ್ಷ ಹಾಗೂ ಪ್ರತಿಯೊಬ್ಬ ಮತದಾರನ ಹೋರಾಟವೂ ಇದಾಗಿದೆ ಚುನಾವಣಾ ಆಯೋಗದ ಸಾಂವಿಧಾನಿಕ ಹೊಣೆಗಾರಿಕೆ ಜನಾದೇಶವನ್ನು ರಕ್ಷಿಸುವುದಾಗಿದೆ. ಆದರೆ, ಜನರ ತೀರ್ಪನ್ನು ಬುಡಮೇಲು ಮಾಡುವ ಅದೇ ಶಕ್ತಿಗಳಿಗೆ ಅದು ನೆರವಾಗುತ್ತಿದೆ. ಈ ಹೋರಾಟ ಕೇವಲ ಮಮತಾ ಬ್ಯಾನರ್ಜಿ ಅವರದ್ದಲ್ಲ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗವು ಜನರ ಜನಾದೇಶವನ್ನು ರಕ್ಷಿಸುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ತಮ್ಮ ಪ್ರಕಾರ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿರುವ ಶಕ್ತಿಗಳಿಗೆ ನೆರವಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ‘ತಡರಾತ್ರಿ ಹುಟ್ಟುಹಬ್ಬದ ಉಡುಗೊರೆ ಗುರುವಾರ ಚುನಾವಣಾ ಆಯೋಗದ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿತ್ತು. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ನ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸಿರುವುದು ಚುನಾವಣಾ ಆಯೋಗ ತನ್ನ ಸಾಂವಿಧಾನಿಕ ಹೊಣೆಗಾರಿಕೆಯಿಂದ ಹಿಂದೆ ಸರಿದಿರುವುದಕ್ಕೆ ಸಮಾನ ಎಂದು ಪಕ್ಷ ಆರೋಪಿಸಿತ್ತು. ಎಂದು ವ್ಯಂಗ್ಯವಾಡಿತ್ತು ಎಂದರು.





