ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ವರುಣ ಎಂಟ್ರಿ ಇರಲಿಲ್ಲ ಆದರೇ ಇದೀಗ ದೇಶಾದ್ಯಂತ ಮಳೆ ಕೊರತೆ ನಡುವೆಯೇ ನೈಋತ್ಯ ಮುಂಗಾರು ದೇಶದ ವಾಯವ್ಯ ಭಾಗದಿಂದ ಹಿಂತೆಗೆದುಕೊಳ್ಳಲು ಆರಂಭಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂಗಾರು ಸಂಪೂರ್ಣವಾಗಿ ಅಂತ್ಯಗೊಳ್ಳುವ ಮುನ್ನ ದೇಶದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಮುಂದುವರಿದಿದ್ದು, ಉತ್ತರ ಅಂಡಮಾನ್ ಸಮುದ್ರದಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶವು ಸೆಪ್ಟೆಂಬರ್ 21ರ ವೇಳೆಗೆ ವಾಯುಭಾರ ಕುಸಿತವಾಗಿ, ಸೆಪ್ಟೆಂಬರ್ 22ರ ವೇಳೆಗೆ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಟ್ಟಿನಲ್ಲಿ, 2026ರ ಮುಂಗಾರು ಹಂಗಾಮಿನಲ್ಲಿ ದೇಶದ ಒಟ್ಟಾರೆ ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು, ವಿಶೇಷವಾಗಿ ದಕ್ಷಿಣ ಮತ್ತು ಈಶಾನ್ಯ ಭಾರತದ ಹಲವು ಪ್ರದೇಶಗಳು ಮಳೆ ಕೊರತೆ ಎದುರಿಸಿವೆ. ಮುಂಗಾರು ಹಿಂತೆಗೆತ ಆರಂಭವಾದರೂ, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಹವಾಮಾನ ವ್ಯವಸ್ಥೆಗಳಿಂದ ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣದಲ್ಲಿ ಸುಧಾರಣೆ ಕಾಣುವ ಸಾಧ್ಯತೆಯಿದೆ.
ಸೆಪ್ಟೆಂಬರ್ 19ರಂದು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಿಂದ ಮುಂಗಾರು ಹಿಂತೆಗೆತ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದ್ದು, ಈ ಹಿಂತೆಗೆತ ಸಾಮಾನ್ಯ ದಿನಾಂಕವಾದ ಸೆಪ್ಟೆಂಬರ್ 17ರ ಸಮೀಪದಲ್ಲೇ ಆರಂಭವಾಗಿದೆ ಎಂದು ಹೇಳಿದೆ.
ಸೆಪ್ಟೆಂಬರ್ 23ರ ಸುಮಾರಿಗೆ ದಕ್ಷಿಣ ಒಡಿಶಾ–ಉತ್ತರ ಆಂಧ್ರ ಕರಾವಳಿಯನ್ನು ದಾಟುವ ನಿರೀಕ್ಷೆಯಿದ್ದು, ಒಡಿಶಾ, ಪಶ್ಚಿಮ ಬಂಗಾಳದ ಗಂಗಾ ಬಯಲು ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ, ಸಿಕ್ಕಿಂ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಮುಂದಿನ ವಾರ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯನ್ನು IMD ಸೂಚಿಸಿದೆ.
ಇನ್ನು ಇತ್ತ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂದಿನ ಐದು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ಬೀದರ್, ಗದಗ, ಹಾಸನ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕಲಬುರಗಿ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಮುಂದಿನ ಐದು ದಿನ ಮಳೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.





