ಗೃಹಲಕ್ಷ್ಮಿ 33ನೇ ಕಂತಿನ ಹಣ ಬಿಡುಗಡೆಗೆ ಮುಹೂರ್ತ ಫಿಕ್ಸ್: ಹೊಸ ನಿಯಮ ಪ್ರಕಟ!

ಮದ್ದೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ( Guarantee Scheme ) ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ( Gruha Lakshmi Scheme ) ಪಾರದರ್ಶಕತೆ ತರಲು ಹಾಗೂ ಅಕ್ರಮಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸೌಲಭ್ಯ ಪಡೆಯುವ ಮನೆಯೊಡತಿಯ ಹೆಸರಲ್ಲೇ ಸಿಮ್ ಕಾರ್ಡ್ ( SIM Card ) ನೋಂದಣಿಯಾಗಿರುವುದು ಇನ್ಮುಂದೆ ಕಡ್ಡಾಯವಾಗಿದ್ದು, ಅನರ್ಹರ ಪರಿಶೀಲನೆ ಬಳಿಕ 33ನೇ ಕಂತಿನ ಮೊತ್ತವನ್ನು ನೇರವಾಗಿ ಅರ್ಹ ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಮರಣ ಹೊಂದಿದವರ ಖಾತೆಗೂ ಜಮೆಯಾಗಿದ್ದ ಹಣ: ಪರಿಷ್ಕರಣೆಗೆ ಆದೇಶ

ಮದ್ದೂರು ತಾಲೂಕಿನ ಕೊಪ್ಪದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಅವರು, ಈವರೆಗೆ ರಾಜ್ಯದ 1.25 ಕೋಟಿ ಮಹಿಳೆಯರಿಗೆ 32 ಕಂತುಗಳಲ್ಲಿ ಒಟ್ಟು ₹64,000 ಹಣವನ್ನು ಡಿಬಿಟಿ ಮೂಲಕ ನೇರವಾಗಿ ತಲುಪಿಸಲಾಗಿದೆ. ಆದರೆ ಇತ್ತೀಚಿನ ಪರಿಶೀಲನೆ ವೇಳೆ, ಮೃತಪಟ್ಟಿರುವ ಸುಮಾರು 1.99 ಲಕ್ಷ ಮಹಿಳೆಯರ ಖಾತೆಗಳಿಗೂ ಬರೋಬ್ಬರಿ ₹117 ಕೋಟಿ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೆ, ಕೆಲವೆಡೆ ಮಹಿಳೆಯರ ಬದಲಿಗೆ ಅವರ ಪತಿಯ ಖಾತೆಗೆ ಹಣ ಸೇರುತ್ತಿರುವುದು ಹಾಗೂ ಹೊರರಾಜ್ಯದ ಕೆಲವರು ಸೌಲಭ್ಯ ದುರುಪಯೋಗಪಡಿಸಿಕೊಳ್ಳುತ್ತಿರುವುದು ಸಮಿತಿಯ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಗಮನ ಸೆಳೆದು ಪಟ್ಟಿಯ ಸಮಗ್ರ ಪರಿಶೀಲನೆ ನಡೆಸಲಾಗಿದೆ.

ನೈಜ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ: ಹೊಸ ನಿಯಮ ಜಾರಿ

ಯೋಜನೆಯ ಹಣವು ರಾಜ್ಯದ ಅರ್ಹ ಯಜಮಾನಿಯರಿಗೆ ಮಾತ್ರ ತಲುಪಬೇಕೆಂಬ ಸದುದ್ದೇಶದಿಂದ ಸರ್ಕಾರದ ಹೊಸ ನಿಯಮಾವಳಿ ಜಾರಿಗೆ ಬಂದಿದೆ. ಅದರಂತೆ ಮಹಿಳೆಯರು ತಮ್ಮದೇ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ನೋಂದಾಯಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಪರಿಷ್ಕರಣೆಯ ನಂತರ ಪ್ರಸ್ತುತ 1 ಕೋಟಿ 24 ಲಕ್ಷ ನೈಜ ಫಲಾನುಭವಿಗಳನ್ನು ಗುರುತಿಸಲಾಗಿದೆ. ಆಗಸ್ಟ್‌ವರೆಗಿನ ಕಂತುಗಳು ಈಗಾಗಲೇ ವಿತರಣೆಯಾಗಿದ್ದು, ಇದೀಗ 33ನೇ ಕಂತಿಗಾಗಿ ಮೀಸಲಿಟ್ಟಿರುವ ಒಟ್ಟು ₹2,480 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post