ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಭಾರತೀಯ ಮತ್ತು ಚೀನಾ ಸೇನೆಗಳ ನಡುವೆ ನಿರಂತರ ಮುಖಾಮುಖಿ ನಡೆಯುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದೆ.
ಗಡಿ ಭದ್ರತೆ, ಚೀನಾದೊಂದಿಗಿನ ರಾಜತಾಂತ್ರಿಕ ಸಂಬಂಧ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
“ಅರುಣಾಚಲ ಪ್ರದೇಶದಲ್ಲಿ ಪಿಎಲ್ಎ ಜೊತೆ ನಿರಂತರ ಮುಖಾಮುಖಿಗಳು ನಡೆಯುತ್ತಿವೆ ಎಂಬ ಐಟಿಬಿಪಿ ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ. ಡೋಕ್ಲಾಂ ಮತ್ತು ಗಲ್ವಾನ್ ಬಳಿಕ ಮತ್ತೊಂದು ಗಂಭೀರ ಸಂಘರ್ಷ ನಡೆಯುತ್ತಿದೆಯೇ? ಆಗಸ್ಟ್ನಲ್ಲಿ ತಕ್ಸಿಂಗ್ ಸಮೀಪ ಚೀನಾ ಅತಿಕ್ರಮಣ ನಡೆಸಿದ ವರದಿಗಳು ಬಂದಿದ್ದವು.
ಆದರೆ, ಇದರಿಂದ ಸುಮಾರು 180 ಕಿ.ಮೀ. ದೂರದಲ್ಲಿರುವ ವಾಚಾ-ದಮೈನಲ್ಲಿ ನಡೆದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳಾಗಿ 47 ದಿನಗಳು ಕಳೆದಿದ್ದರೂ ಮುಖಾಮುಖಿಗಳು ಮುಂದುವರಿದಿವೆ ಎಂದು ವರದಿಯಾಗಿದೆ. ಭಾರತದ ಗಸ್ತು ಹಕ್ಕುಗಳಿಗೆ ಧಕ್ಕೆಯಾಗಿದೆಯೇ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಕೇವಲ ರಾಜತಾಂತ್ರಿಕ ಫೋಟೋ ಸೆಷನ್ಗಳು ಮತ್ತು ಅಪ್ಪುಗೆಯ ರಾಜತಾಂತ್ರಿಕತೆಯ ಬದಲಿಗೆ ಹೊಣೆಗಾರಿಕೆ ಇರಬೇಕು ಎಂದು ಅವರು ಹೇಳಿದ್ದಾರೆ.
ಚೀನಾದಿಂದ ಭಾರತಕ್ಕೆ ಆಗುತ್ತಿರುವ ಆಮದು ಪ್ರಮಾಣ ಹೆಚ್ಚುತ್ತಿರುವುದು ಹಾಗೂ ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆ ವಿಸ್ತರಿಸುತ್ತಿರುವುದಕ್ಕೂ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, “2020-21ರ ಹಣಕಾಸು ವರ್ಷದಲ್ಲಿ ಗಲ್ವಾನ್ನಲ್ಲಿ 20 ಭಾರತೀಯ ಯೋಧರು ಪ್ರಾಣತ್ಯಾಗ ಮಾಡಿದ ಬಳಿಕ ಚೀನಾದಿಂದ ಭಾರತದ ಆಮದು ಶೇ.102ರಷ್ಟು ಹೆಚ್ಚಾಗಿದೆ.
ಅದೇ ವೇಳೆ, ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ ಶೇ.155ರಷ್ಟು ಏರಿಕೆಯಾಗಿ 112.16 ಶತಕೋಟಿ ಡಾಲರ್ಗೆ ತಲುಪಿದೆ. ಹಾಗಾದರೆ, ‘ಮೇಕ್ ಇನ್ ಇಂಡಿಯಾ’ ಈಗ ‘ಇಂಪೋರ್ಟ್ ಫ್ರಂ ಚೀನಾ’ ಆಗಿದೆಯೇ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಜೊತೆಗಿನ ಇತ್ತೀಚಿನ ಮುಖಾಮುಖಿಗಳ ಕುರಿತು ನೀಡಿರುವ ಹೇಳಿಕೆಗಳು ಈ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಚೀನಾಕ್ಕೆ ಈಗಾಗಲೇ ಹಲವು ಬಾರಿ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಗಡಿ ಪರಿಸ್ಥಿತಿಯ ಕುರಿತು ಸರ್ಕಾರ ಹೊಣೆಗಾರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ರಾಷ್ಟ್ರೀಯ ಭದ್ರತೆ, ಚೀನಾದ ಮೇಲಿನ ಭಾರತದ ಆರ್ಥಿಕ ಅವಲಂಬನೆ ಹಾಗೂ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆಗಳಿಂದ ಆಗಿರುವ ಪ್ರಯೋಜನಗಳ ಕುರಿತು ಪ್ರಶ್ನಿಸಿದ್ದಾರೆ.





