ನಟ ದರ್ಶನ್ ತೂಗುದೀಪ ಮತ್ತು ಯುವ ನಟ ಧನ್ವೀರ್ ಗೌಡ ನಡುವೆ ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ಆತ್ಮೀಯ ಹಾಗೂ ಗುರು-ಶಿಷ್ಯನಂತಹ ಗಟ್ಟಿ ಸ್ನೇಹದ ಇತಿಹಾಸವಿತ್ತು. ಚಿತ್ರರಂಗದ ಇತಿಹಾಸದಲ್ಲಿ ಧನ್ವೀರ್ ಅವರನ್ನು ದರ್ಶನ್ ಅವರ ಅತ್ಯಂತ ಆಪ್ತ ವಲಯದ ‘ಮೈದುನ’ನಂತೆ ನೋಡಲಾಗುತ್ತಿತ್ತು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಪಾಲಾದಾಗ, ಧನ್ವೀರ್ ಅವರು ದರ್ಶನ್ ಕುಟುಂಬದ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದರು. ದರ್ಶನ್ ಪರವಾಗಿ ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದರು. ಆದ್ರೆ ಇವರು ಸಂಬಧಕ್ಕೆ ಇದೀಗ ಕೆಟ್ಟ ಕಣ್ಣು ಬಿದ್ದಿದೆ.
ಹೌದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವಿನ ಇನ್‌ಸ್ಟಾಗ್ರಾಮ್ ಜಟಾಪಟಿ ತಾರಕಕ್ಕೇರಿದ್ದು, ಇದೀಗ ಧನ್ವೀರ್ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಮತ್ತು ಅವರ ಮ್ಯಾನೇಜರ್ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಮನೆಗೆ ಅಕ್ರಮವಾಗಿ ನುಗ್ಗಿ, ರೌಡಿಗಳೊಂದಿಗೆ ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದು, ಪೊಲೀಸರು ಈ ಬಗ್ಗೆ ಎನ್‌ಸಿಆರ್ (Non-Cognizable Report) ದಾಖಲಿಸಿಕೊಂಡಿದ್ದಾರೆ.
ಧನ್ವೀರ್ ತಂದೆಯ ದೂರು: ಅಕ್ಟೋಬರ್ 21ರಂದು ರಾತ್ರಿ ಧನ್ವೀರ್ ಅವರು ಮೈಸೂರಿಗೆ ತೆರಳಿದ್ದಾಗ, ವಿಜಯಲಕ್ಷ್ಮಿ ಹಾಗೂ ಅವರ ಮ್ಯಾನೇಜರ್ ನಾಗರಾಜ್ ಕೆಲ ವ್ಯಕ್ತಿಗಳೊಂದಿಗೆ (ಭೋಜ ಹಾಗೂ ಬಾಟಲಿ ಪ್ರಮೋದ್) ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಮನೆಯಲ್ಲಿದ್ದ ಧನ್ವೀರ್ ಸಂಬಂಧಿಯನ್ನು ಕಂಡು ರೌಡಿ ಎಂದು ತಪ್ಪಾಗಿ ಭಾವಿಸಿ ನಾಗರಾಜ್ ಕಿರುಚಾಡಿದ್ದಾರೆ ಮತ್ತು ಧನ್ವೀರ್‌ಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಮ್ಮೇಗೌಡ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಜಯಲಕ್ಷ್ಮಿ ಮ್ಯಾನೇಜರ್ ದೂರು: ಇದಕ್ಕೂ ಮುನ್ನ, ವಿಜಯಲಕ್ಷ್ಮಿ ಅವರ ಪಿಎ/ಮ್ಯಾನೇಜರ್ ಆಗಿರುವ ನಾಗರಾಜ್ ಅವರು ಧನ್ವೀರ್ ವಿರುದ್ಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಧನ್ವೀರ್ ಅವರು ತಮಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಆಡಿಯೋ ರೆಕಾರ್ಡಿಂಗ್ ಸಮೇತ ದೂರು ದಾಖಲಿಸಿದ್ದರು.
ವಿಜಯಲಕ್ಷ್ಮಿ ಅವರು “ಕೆಲವರು ದರ್ಶನ್ ಹೆಸರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಧನ್ವೀರ್ ಅವರು ಪರೋಕ್ಷವಾಗಿ ತಿರುಗೇಟು ನೀಡಿ ಪೋಸ್ಟ್ ಹಂಚಿಕೊಂಡಿದ್ದರು. ಈ ಸಾಮಾಜಿಕ ಜಾಲತಾಣದ ಜಗಳವೇ ಸದ್ಯ ವೈಯಕ್ತಿಕ ಸಂಘರ್ಷಕ್ಕೆ ಕಾರಣವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇತ್ತ ಇದಕ್ಕೆ ಪ್ರತಿಕ್ರಿಯಿಸಿದ ನಟ ಧನ್ವೀರ್, ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ನೀಡಿರುವ ದೂರಿಗೆ ಸಂಬಂಧಿಸಿದಂತೆ ನಟ ಧನ್ವೀರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ನಾನು ನಾಗರಾಜ್‌ಗೆ ಸುಮ್ಮನೆ ಬೈದಿಲ್ಲ, ಅದಕ್ಕೆ ಬಲವಾದ ಕಾರಣ ಇದೆ. ದರ್ಶನ್ ಅಣ್ಣನ ಪರವಾಗಿ ನಿಂತಿದ್ದಕ್ಕೆ ಕೆಲವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ” ಎಂದು ಧನ್ವೀರ್ ಆರೋಪಿಸಿದ್ದಾರೆ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಎಲ್ಲರ ಮುಖವಾಡ ಕಳಚುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ದರ್ಶನ್ ಅವರೊಂದಿಗೆ ತಮಗೆ ಯಾವುದೇ ಜಗಳವಾಗಿಲ್ಲ, ಹಾಗಾಗಿ ರಾಜಿ ಸಂಧಾನದ ಪ್ರಶ್ನೆಯೇ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ





