ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ನ ಆಕ್ಸಲ್ ಬ್ಲೇಡ್ ಏಕಾಏಕಿ ಕಟ್ ಆಗಿ, ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಬೆಂಗಳೂರಿನಿಂದ ಸಾಗರದ ಕಡೆಗೆ ಬರುತ್ತಿದ್ದ ಈ ಬಸ್, ಸಾಗರ ಪಟ್ಟಣದ ಬಾಪಟ್ ಕಲ್ಯಾಣ ಮಂಟಪದ ಸಮೀಪ ಬರುತ್ತಿದ್ದಂತೆ ಈ ದುರ್ಘಟನೆ ನಡೆದಿದೆ. ವಾಹನದ ಆಕ್ಸಲ್ ಬ್ಲೇಡ್ ತುಂಡಾದ ಪರಿಣಾಮ ಚಾಲಕನಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ಹೆದ್ದಾರಿಯಲ್ಲೇ ಬಸ್ ಪಲ್ಟಿಯಾಗಿದೆ.
ಅಪಘಾತದ ಸಂದರ್ಭದಲ್ಲಿ ಬಸ್ಸಿನಲ್ಲಿ 42 ಮಂದಿ ಪ್ರಯಾಣಿಕರಿದ್ದರು. ಎಲ್ಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ತಕ್ಷಣವೇ ಸಾಗರದ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಸಾಗರ ಪೇಟೆ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಹೆದ್ದಾರಿಯಲ್ಲಿ ಉಂಟಾಗಿದ್ದ ಟ್ರಾಫಿಕ್ ದಟ್ಟಣೆಯನ್ನು ಸುಗಮಗೊಳಿಸಿದ್ದಾರೆ. ಘಟನೆ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




