ಸಾಗರದಲ್ಲಿ ಭೀಕರ ಅಪಘಾತ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 42 ಪ್ರಯಾಣಿಕರು ಪಾರು

ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ನ ಆಕ್ಸಲ್ ಬ್ಲೇಡ್ ಏಕಾಏಕಿ ಕಟ್ ಆಗಿ, ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

​ಬೆಂಗಳೂರಿನಿಂದ ಸಾಗರದ ಕಡೆಗೆ ಬರುತ್ತಿದ್ದ ಈ ಬಸ್, ಸಾಗರ ಪಟ್ಟಣದ ಬಾಪಟ್ ಕಲ್ಯಾಣ ಮಂಟಪದ ಸಮೀಪ ಬರುತ್ತಿದ್ದಂತೆ ಈ ದುರ್ಘಟನೆ ನಡೆದಿದೆ. ವಾಹನದ ಆಕ್ಸಲ್ ಬ್ಲೇಡ್ ತುಂಡಾದ ಪರಿಣಾಮ ಚಾಲಕನಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ಹೆದ್ದಾರಿಯಲ್ಲೇ ಬಸ್ ಪಲ್ಟಿಯಾಗಿದೆ.

​ಅಪಘಾತದ ಸಂದರ್ಭದಲ್ಲಿ ಬಸ್ಸಿನಲ್ಲಿ 42 ಮಂದಿ ಪ್ರಯಾಣಿಕರಿದ್ದರು. ಎಲ್ಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ತಕ್ಷಣವೇ ಸಾಗರದ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

​ಸ್ಥಳಕ್ಕೆ ಸಾಗರ ಪೇಟೆ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಹೆದ್ದಾರಿಯಲ್ಲಿ ಉಂಟಾಗಿದ್ದ ಟ್ರಾಫಿಕ್ ದಟ್ಟಣೆಯನ್ನು ಸುಗಮಗೊಳಿಸಿದ್ದಾರೆ. ಘಟನೆ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share it :

Leave a Reply

Your email address will not be published. Required fields are marked *