ಅಗ್ನಿವೀರರಿಗೆ ಕಾಯಂ ಸೈನಿಕರಾಗಲು ಹೆದ್ದಾರಿ ಮುಕ್ತ: 2 ವರ್ಷ ಸೇವೆ ವಿಸ್ತರಣೆ ನಂತರ ಕಾಯಂ ಸೇರ್ಪಡೆಗೆ ಕೇಂದ್ರ ಅನುಮತಿ

ಪಶ್ಚಿಮ ಬಂಗಾಳ: ನಾಲ್ಕು ವರ್ಷಗಳ ಒಪ್ಪಂದದ ಅವಧಿಯ ಬಳಿಕ ಹೆಚ್ಚುವರಿಯಾಗಿ ಎರಡು ವರ್ಷಗಳ ಸೇವಾವಧಿ ಪೂರೈಸುವ ಎಲ್ಲಾ ಅಗ್ನಿವೀರರಿಗೂ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕಾಯಂ ಸೈನಿಕರಾಗಿ ಮುಂದುವರಿಯಲು ಮುಕ್ತ ಅವಕಾಶ ಸಿಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಅಭ್ಯರ್ಥಿಗಳ ಸ್ವಂತ ಆಸಕ್ತಿ ಹಾಗೂ ನಿಗದಿತ ಅರ್ಹತೆ-ದಕ್ಷತೆಯನ್ನು ಆಧರಿಸಿ ಈ ಖಾಯಂ ನೇಮಕಾತಿ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಬಾಗ್ದೋಗ್ರಾ ವಾಯುನೆಲೆಯಲ್ಲಿ ಯೋಧರೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವರು, ಈ ನಿರ್ಧಾರವು ಅಗ್ನಿವೀರರಿಗೆ ಕೇಂದ್ರ ಸರ್ಕಾರ ನೀಡಿದ ಮಹತ್ವದ ‘ದೀಪಾವಳಿ ಕೊಡುಗೆ’ ಎಂದು ಹರ್ಷ ವ್ಯಕ್ತಪಡಿಸಿದರು. ಯೋಧರು ಮತ್ತು ಅವರ ಕುಟುಂಬದ ಭದ್ರತೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದ್ದು, ದೇಶಸೇವೆಯಲ್ಲಿ ಮುಂದುವರಿಯಲು ಬಯಸುವ ಸಮರ್ಥ ಯುವಕರಿಗೆ ಇದು ದೊಡ್ಡ ವೇದಿಕೆಯಾಗಲಿದೆ ಎಂದರು.

ಸಂಪುಟ ಸಭೆಯಲ್ಲಿ ಮಹತ್ವದ ನೀತಿ ಬದಲಾವಣೆ

2022ರ ಜೂನ್‌ನಲ್ಲಿ ಜಾರಿಗೆ ಬಂದಿದ್ದ ಅಗ್ನಿಪಥ್ ಯೋಜನೆಯ ಅನ್ವಯ, ನೇಮಕಗೊಂಡ ಯುವಕರಿಗೆ 4 ವರ್ಷಗಳ ಸೇವಾ ಅವಧಿ ಮಾತ್ರ ನಿಗದಿಯಾಗಿತ್ತು. ಅವರಲ್ಲಿ ಕೇವಲ ಶೇಕಡಾ 25ರಷ್ಟು ಮಂದಿಯನ್ನು ಮಾತ್ರ ಕಾಯಂ ಸೇವೆಗೆ ಉಳಿಸಿಕೊಳ್ಳುವ ನಿಯಮವಿತ್ತು. ಆದರೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಹೊರಹೋಗಲು ಸಿದ್ಧರಾಗಿದ್ದ ಅಗ್ನಿವೀರರ ಸೇವಾ ಅವಧಿಯನ್ನು ಹೆಚ್ಚುವರಿಯಾಗಿ 2 ವರ್ಷ ವಿಸ್ತರಿಸಲು ಹಾಗೂ ಆ ನಂತರ ಅರ್ಹರಿಗೆ ಕಾಯಂ ಸ್ಥಾನಮಾನ ನೀಡಲು ತೀರ್ಮಾನಿಸಲಾಯಿತು.

ಸುಮಾರು 18,300 ಅಗ್ನಿವೀರರ 4 ವರ್ಷಗಳ ಅವಧಿ ಮುಕ್ತಾಯವಾಗಲು ಕೆಲವೇ ವಾರಗಳಿರುವಾಗ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಈ ನೂತನ ಬದಲಾವಣೆಯನ್ನು ಪ್ರಕಟಿಸಿದ್ದರು. ಸರ್ಕಾರದ ಈ ನೂತನ ಮಾರ್ಗಸೂಚಿಯಿಂದಾಗಿ ಹಾಲಿ ಸೇವೆಯಲ್ಲಿರುವ ಬಹುತೇಕ ಎಲ್ಲಾ ಅಗ್ನಿವೀರರು ಸೇನಾ ಪಡೆಯಲ್ಲಿ ಖಾಯಂ ಆಗಿ ಉಳಿದುಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಅಗ್ನಿಪಥ್ ನಿಯಮ ರದ್ದಾಗಿಲ್ಲ, ಸೇವಾ ಹಾದಿ ಸುಲಭ

ಪ್ರಸ್ತುತ ಮೂರು ಲಕ್ಷಕ್ಕೂ ಹೆಚ್ಚಿನ ಯುವಕರು ಅಗ್ನಿಪಥ್ ಅಡಿಯಲ್ಲಿ ದೇಶದ ಗಡಿ ಕಾಯುವ ಕಾಯಕದಲ್ಲಿದ್ದಾರೆ. ಈ ಬದಲಾವಣೆಗಳ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು, “ಅಗ್ನಿಪಥ್ ನೇಮಕಾತಿ ಯೋಜನೆಯನ್ನು ರದ್ದುಪಡಿಸಿಲ್ಲ. ಬದಲಿಗೆ 6 ವರ್ಷಗಳ (4+2) ಸೇವಾವಧಿ ಮುಗಿದ ಮೇಲೆ, ಸೇನೆಯಲ್ಲಿ ಮುಂದುವರಿಯುವ ಇಚ್ಛೆ ಹೊಂದಿರುವ ಹಾಗೂ ದೈಹಿಕ ದಕ್ಷತೆ ಮತ್ತು ಉತ್ತಮ ಶಿಸ್ತು ಕಾಪಾಡಿಕೊಂಡಿರುವ ಎಲ್ಲಾ ಅಗ್ನಿವೀರರನ್ನು ಕಾಯಂ ಸೈನಿಕರನ್ನಾಗಿ ನಿಯೋಜಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸೇನೆಯ ಸರಾಸರಿ ವಯೋಮಿತಿಯನ್ನು ತಗ್ಗಿಸಿ ಯುವ ಶಕ್ತಿಯನ್ನು ತುಂಬುವ ಉದ್ದೇಶದಿಂದ 17.5 ರಿಂದ 21 ವರ್ಷದೊಳಗಿನ ಯುವಕರಿಗಾಗಿ ಅಗ್ನಿಪಥ್ ಯೋಜನೆಯನ್ನು ಪರಿಚಯಿಸಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಹೊರಬರುವ ಶೇ. 75ರಷ್ಟು ಯುವಕರ ಭವಿಷ್ಯದ ಬಗ್ಗೆ ವಿಪಕ್ಷಗಳಿಂದ ಕೇಳಿಬಂದಿದ್ದ ತೀವ್ರ ಟೀಕೆಗಳಿಗೆ ಕೇಂದ್ರ ಸರ್ಕಾರದ ಈ ನಿರ್ಧಾರ ಸಂಪೂರ್ಣ ತೆರೆ ಎಳೆದಿದೆ.

Share it :

Leave a Reply

Your email address will not be published. Required fields are marked *