ಬೆಂಗಳೂರು: ವಿವಿಧ ಕಲ್ಯಾಣ ಯೋಜನೆಗಳ(Subsidized Vehicles) ಫಲಾನುಭವಿಗಳಿಗೆ ವಿತರಿಸುವ ಸಾರಿಗೆ ವಾಹನಗಳು ಹಾಗೂ ಸ್ವಯಂ ಉದ್ಯೋಗದ ಉಪಕರಣಗಳಿಗೆ ಕರ್ನಾಟಕದ ಅಸ್ಮಿತೆಯಾದ ಹಳದಿ ಮತ್ತು ಕೆಂಪು ಬಣ್ಣದ ವಿನ್ಯಾಸವನ್ನು(Yellow-red design mandatory) ಅಳವಡಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಇದರ ಜೊತೆಗೆ ಅಧಿಕೃತ ರಾಜ್ಯ ಲಾಂಛನವನ್ನು ಎದ್ದು ಕಾಣುವಂತೆ ಮುದ್ರಿಸುವುದು ಇನ್ಮುಂದೆ ಕಡ್ಡಾಯವಾಗಲಿದೆ. ಆ ಮೂಲಕ ಸರ್ಕಾರದಿಂದ ಸಬ್ಸಿಡಿ ವಾಹನಗಳಿಗೆ(Subsidized Vehicles) ಹಳದಿ-ಕೆಂಪು ವಿನ್ಯಾಸದ ಬಣ್ಣ ಬಳಿಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸ್ಪಷ್ಟ ಸುತ್ತೋಲೆ ರವಾನಿಸಿದ್ದಾರೆ.
ಯಾವೆಲ್ಲಾ ವಾಹನ, ಸಲಕರಣೆಗಳಿಗೆ ಹೊಸ ನಿಯಮ ಅನ್ವಯ?
ಸರ್ಕಾರದ ಸಬ್ಸಿಡಿ ಅಥವಾ ನೇರ ಅನುದಾನದಡಿ ವಿತರಣೆಯಾಗುವ ಪ್ರಯಾಣಿಕ ಆಟೋರಿಕ್ಷಾಗಳು, ಟ್ಯಾಕ್ಸಿಗಳು, ಸರಕು ಸಾಗಣೆ ವಾಹನಗಳು(Subsidized Vehicles), ಬೀದಿಬದಿ ವ್ಯಾಪಾರಿಗಳಿಗೆ ನೀಡುವ ಸಂಚಾರಿ ತಳ್ಳುಗಾಡಿಗಳು ಹಾಗೂ ಕೃಷಿ-ಕೈಗಾರಿಕಾ ಉದ್ದೇಶದ ಸಣ್ಣ ಯಂತ್ರೋಪಕರಣಗಳು ಈ ನೂತನ ಆದೇಶದ ವ್ಯಾಪ್ತಿಗೆ ಒಳಪಡಲಿವೆ. ಫಲಾನುಭವಿಗಳಿಗೆ ಹಸ್ತಾಂತರಿಸುವ ಮುನ್ನವೇ ನಿಗದಿತ ಮಾದರಿಯಲ್ಲಿ ಬಣ್ಣ ಮತ್ತು ಗಂಡಭೇರುಂಡ ಲಾಂಛನವನ್ನು ಅಳವಡಿಸುವುದನ್ನು ಸಂಬಂಧಪಟ್ಟ ನಿಗಮ-ಮಂಡಳಿಗಳು ಖಾತರಿಪಡಿಸಿಕೊಳ್ಳಬೇಕಿದೆ.
ದುರುಪಯೋಗ ತಡೆಗೆ ಸರ್ಕಾರದ ಮಹತ್ವದ ಹೆಜ್ಜೆ
ಸರ್ಕಾರಿ ಸಹಾಯಧನದಲ್ಲಿ ಪಡೆದ ವಾಹನಗಳು ಮತ್ತು ಯಂತ್ರಗಳು ಅನಧಿಕೃತವಾಗಿ ಅನ್ಯರ ಪಾಲಾಗುವುದನ್ನು ತಡೆಯುವುದು ಹಾಗೂ ಸಾರ್ವಜನಿಕವಾಗಿ ಇವುಗಳನ್ನು ಸುಲಭವಾಗಿ ಗುರುತಿಸುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ಏಕರೂಪದ ಸರ್ಕಾರಿ ಬ್ರಾಂಡಿಂಗ್ ಮೂಲಕ ಸೌಲಭ್ಯಗಳ ಪಾರದರ್ಶಕ ಬಳಕೆಗೆ ಒತ್ತು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹಂಚಿಕೆಯಾಗಲಿರುವ ಪ್ರತಿಯೊಂದು ಸವಲತ್ತಿಗೂ ಈ ಆದೇಶ ತಕ್ಷಣದಿಂದಲೇ ಅನ್ವಯವಾಗಲಿದೆ.





