ಲಖನೌ: ಮುಂದಿನ ಒಂದು ವರ್ಷ ಅನಗತ್ಯವಾಗಿ ಚಿನ್ನವನ್ನು ಖರೀದಿಸಬೇಡಿ ಎಂದು ನಾನು ಮನವಿ ಮಾಡಿದ್ದಕ್ಕೆ ದೇಶದ ನಾಗರಿಕರು ಸ್ಪಂದಿಸಿದ್ದರು. ಹೀಗಾಗಿಯೇ ಈ ಹಳದಿ ಲೋಹದ ಬೆಲೆ ತಗ್ಗಿದೆ. ತಾವು ಜನರ ಹಣವನ್ನು ಉಳಿಸಿಕೊಟ್ಟಿದ್ದಾಗಿ ಈಗ ಜನರು ತಮ್ಮ ಬಳಿ ಹೇಳುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಲಕ್ನೋದ ಗೋಮತಿ ನಗರದಲ್ಲಿರುವ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಡೆದ 5ನೇ ರಾಷ್ಟ್ರೀಯ ಕೌಶಲ್ಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು,ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿ, ಭಾರತದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಒತ್ತಡ ಉಂಟಾಗಿದ್ದ ಮೇ ತಿಂಗಳಲ್ಲಿ, ಚಿನ್ನವನ್ನು ಖರೀದಿಸದಂತೆ ಪ್ರಧಾನಿ ಮೋದಿ ದೇಶದ ಜನರಿಗೆ ಮನವಿ ಮಾಡಿದರು.
ಚಿನ್ನದ ಖರೀದಿಯು ವಿದೇಶಿ ವಿನಿಮಯವನ್ನು ವ್ಯಾಪಕವಾಗಿ ಬಳಸುವ ಮತ್ತೊಂದು ಕ್ಷೇತ್ರವಾಗಿದೆ.
‘ಚಿನ್ನದ ಖರೀದಿಯು ವಿದೇಶಿ ವಿನಿಮಯವನ್ನು ವ್ಯಾಪಕವಾಗಿ ಬಳಸುವ ಮತ್ತೊಂದು ಕ್ಷೇತ್ರವಾಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ, ನಾವು ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸದಿರಲು ನಿರ್ಧರಿಸಬೇಕು’ ಎಂದು ಪ್ರಧಾನಿ ಆಗ ಹೈದರಾಬಾದ್ನಲ್ಲಿ ನಡೆದ ಸಮಾವೇಶವೊಂದರಲ್ಲಿ ಹೇಳಿದ್ದರು.
ಪ್ರಧಾನಿ ಮಾಡಿದ್ದ ಏಳು ಮನವಿಗಳಲ್ಲಿ, ಇಂಧನ ಬಳಕೆ ಮಿತಗೊಳಿಸುವುದು, ಮನೆಯಿಂದಲೇ ಕೆಲಸ ಮಾಡುವ ಪದ್ಧತಿಯನ್ನು ಪುನಃ ಜಾರಿಗೆ ತರಲು ಮತ್ತು ವಿದೇಶ ಪ್ರವಾಸಗಳನ್ನು ಕಡಿಮೆ ಮಾಡಲು ನಾಗರಿಕರನ್ನು ಕೋರಿದ್ದರು. ಸೆಪ್ಟೆಂಬರ್ನಲ್ಲಿ ಮಾಡಿದ ಇದೇ ರೀತಿಯ ಮತ್ತೊಂದು ಮನವಿಯಲ್ಲಿ, ಅಗತ್ಯವಿಲ್ಲದ ಹೊರತು ಚಿನ್ನವನ್ನು ಖರೀದಿಸದಂತೆ ಅವರು ಜನರಿಗೆ ಸೂಚಿಸಿದ್ದರು.
ಮೇ ತಿಂಗಳಲ್ಲಿ, ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ 6 ರಿಂದ 15ಕ್ಕೆ ಏರಿಸಿತ್ತು. ಪ್ರಧಾನಿ ಮೋದಿಯವರ ಮನವಿಯ ಮರುದಿನವೇ, ಆಭರಣ ಕಂಪನಿಗಳ ಷೇರು ಮೌಲ್ಯದ ಮೇಲೆ ಇದರ ಪರಿಣಾಮ ಕಂಡುಬಂದಿತ್ತು ಎಂದರು.
ಪ್ರಧಾನಿ ಮೋದಿಯವರ ಮನವಿಯು ಚಿನ್ನದ ಬೇಡಿಕೆ ಕಡಿಮೆಯಾಗಲು ಕಾರಣವಾಯಿತು ಎಂದು ದತ್ತಾಂಶಗಳು ಸೂಚಿಸುತ್ತವೆ. ಸರ್ಕಾರಿ ದತ್ತಾಂಶದ ಪ್ರಕಾರ, ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಅಧಿಕೃತ ಚಿನ್ನದ ಆಮದು ಸುಮಾರು ಶೇ 40ರಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ ದೇಶವು $24.78 ಶತಕೋಟಿ ಚಿನ್ನ ಆಮದು ಮಾಡಿಕೊಂಡಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ $41.24 ಶತಕೋಟಿಯಾಗಿತ್ತು.
‘ಅಗತ್ಯವಿಲ್ಲದಿದ್ದರೆ, ಒಂದು ವರ್ಷದ ಮಟ್ಟಿಗೆ ಚಿನ್ನವನ್ನು ಖರೀದಿಸಬೇಡಿ
ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಪ್ರಧಾನಿ ಮೋದಿ ಅವರ ಮನವಿಗೆ ಒಂದು ದಿನ ಮೊದಲು, ಅಂದರೆ ಮೇ 9 ರಂದು 24 ಕ್ಯಾರೆಟ್ ಪ್ರತಿ ಗ್ರಾಂಗೆ 15,250 ರೂಪಾಯಿಯಷ್ಟಿದ್ದ ಚಿನ್ನದ ಬೆಲೆ, ಇಂದು ಪ್ರತಿ ಗ್ರಾಂಗೆ 12,523 ರೂಪಾಯಿಗೆ ಇಳಿದಿದೆ. ‘ಗುಡ್ರಿಟರ್ನ್ಸ್’ (goodreturns) ಪ್ರಕಾರ, ಈ ದರಗಳು ದೆಹಲಿಯಲ್ಲಿನ 24 ಕ್ಯಾರೆಟ್ ಚಿನ್ನಕ್ಕೆ ಅನ್ವಯಿಸುತ್ತವೆ.
‘ಅಗತ್ಯವಿಲ್ಲದಿದ್ದರೆ, ಒಂದು ವರ್ಷದ ಮಟ್ಟಿಗೆ ಚಿನ್ನವನ್ನು ಖರೀದಿಸಬೇಡಿ ಎಂದು ನಾನು ದೇಶವಾಸಿಗಳಿಗೆ ಮನವಿ ಮಾಡಿದ್ದೆ’ ಎಂದ ಅವರು, 1965ರಲ್ಲಿ ತೀವ್ರ ಆಹಾರ ಕೊರತೆಯಿದ್ದಾಗ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಒಂದು ಹೊತ್ತಿನ ಊಟವನ್ನು ತ್ಯಜಿಸುವಂತೆ ನೀಡಿದ್ದ ಕರೆಗೆ, ತಮ್ಮ ಈ ಮನವಿಯನ್ನು ಹೋಲಿಸಿದರು.
‘ಆಗ ಈ ದೇಶವು ಶಾಸ್ತ್ರಿ ಅವರ ಕರೆಯನ್ನು ಪಾಲಿಸಿತ್ತು. ನನ್ನ ದೇಶದಲ್ಲಿ ಇಂದಿಗೂ ಅದೇ ಗುಣವಿದೆ. ನನ್ನಂತಹ ಸಾಮಾನ್ಯ ವ್ಯಕ್ತಿಯೊಬ್ಬ ಚಿನ್ನದ ಖರೀದಿಯನ್ನು ಕಡಿಮೆ ಮಾಡುವಂತೆ ಕೇಳಿಕೊಂಡಾಗ, ದೇಶವಾಸಿಗಳು ಅದನ್ನು ಪಾಲಿಸಿದರು; ಪರಿಣಾಮವಾಗಿ ಚಿನ್ನದ ಬೆಲೆ ಇಳಿದವು. ಇಂದು ಜನರು ನನಗೆ, ‘ಮೋದಿ ಜೀ, ನೀವು ಹೇಳಿದಿರಿ, ನಾವು ನಿಮ್ಮ ಸಲಹೆಯನ್ನು ಪಾಲಿಸಿದೆವು, ಇದರಿಂದ ನಮ್ಮ ಹಣ ಉಳಿತಾಯವಾಯಿತು’ ಎಂದು ಹೇಳುತ್ತಿದ್ದಾರೆ’ ಎಂದು ಪ್ರಧಾನಿ ನುಡಿದರು.









ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)