ಹಿರಿಯೂರು: ಜಿಲ್ಲಾಧಿಕಾರಿಗಳೇ ಖಾತೆ ಮಾಡಿಕೊಡಲು ಅಧಿಕಾರಿಯೊಬ್ಬ ಲಂಚ ಕೇಳಿದ್ದು ನಿಜವಾದರೆ ಅದರ ಬಗ್ಗೆ ಪರಿಶೀಲನೆ ನಡೆಸಿ ಆತನನ್ನು ಬಲಿ ಹಾಕಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದರು.
ಹಿರಿಯೂರು ತಾಲ್ಲೂಕಿನ ಕೆ ಎಂ ಕೊಟ್ಟಿಗೆ ಎಕೆ ಕಾಲೋನಿಯ ಕೆ ಚಂದ್ರು ‘ಖಾತೆ ಲಂಚ’ದ ಬಗ್ಗೆ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಶನಿವಾರ ದೂರಿದಾಗ ಸಿಎಂ ಕಿಡಿ, ಕಿಡಿಯಾದರು. “ಜಿಲ್ಲಾಧಿಕಾರಿಗಳೇ ಹಾಗೂ ಉಪವಿಭಾಗಾಧಿಕಾರಿಗಳೇ, ಇವತ್ತೇ ಈ ಬಗ್ಗೆ ತೀರ್ಮಾನ ಆಗಬೇಕು. ಲಂಚ ಕೇಳಿರುವುದು ನಿಜವೆಂದು ಗೊತ್ತಾದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಂತಹವರನ್ನು ಬಿಡಬಾರದು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಮ್ಮ ನನಗೆ ಕೈ ಮುಗೀಬೇಡಿ. ನಾವು ನಿಮಗೆ ಕೈ ಮುಗಿಯಬೇಕು
“ಅಮ್ಮ ನನಗೆ ಕೈ ಮುಗೀಬೇಡಿ. ನಾವು ನಿಮಗೆ ಕೈ ಮುಗಿಯಬೇಕು. ಸಮಸ್ಯೆ ಏನು ಅಂತ ಹೇಳಿ” ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಕೈಮುಗಿದ ಹಿರಿಯ ಜೀವಗಳ ಬಳಿ ಸಿಎಂ ಪ್ರಾರ್ಥಿಸಿದರು.
ಸ್ವಾಮಿ ನಮ್ಮ ಜಮೀನಿನ ಮೇಲೆ ಹೈಟೆನ್ಷನ್ ವಿದ್ಯುತ್ ಮಾರ್ಗ ಹೋಗುವುದು ಬೇಡ. ನಮಗೆ ಜಮೀನು ಕಳೆದುಕೊಳ್ಳುವ ಭಯ ಎದುರಾಗಿದೆ ಎಂದು ಯರಿಚಿಕ್ಕನಹಳ್ಳಿಯ ಮಾನಸ ಹಾಗೂ ರವಿ ಎಂಬುವರು ಸಿಎಂ ಎದುರಿನ ಮೇಜಿನ ಮೇಲೆ ತಲೆಯಿಟ್ಟು ಬೇಡಿ ಕೊಂಡರು. ತಾಲೂಕಿನ 22 ಗ್ರಾಮಗಳ ಮೇಲೆ ಹಾದುಹೋಗಿರುವ ಹೈಟೆನ್ಷನ್ ವಿದ್ಯುತ್ ತಂತಿಗಳಿಂದ ಅಡಿಕೆ ತೋಟಗಳಿಗೆ ಸಮಸ್ಯೆಯಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ತಾಯಿ, ಹೈಟೆನ್ಷನ್ ವಿದ್ಯುತ್ ಮಾರ್ಗ ಹೋಗುತ್ತೆ ಎಂದು ಟೆನ್ಷನ್ ಮಾಡಿಕೊಳ್ಳಬೇಡಿ. ನಾನು ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ” ಎಂದು ಹೇಳಿದರು. ಎರಡು ಮೂರು ದಿನಗಳಲ್ಲಿ ಸ್ಥಳ ಪರಿಶೀಲನೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅನೇಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಕ್ಕೆ ಸೂಚಿಸಿದ ಸಿಎಂ
ಪತ್ರಿಕಾ ವಿತರಕರಾದ ಏಕಾಂತಪ್ಪ ಅವರು, “ಮುಖ್ಯಮಂತ್ರಿಯವರೇ ಕೆಎಸ್ ಆರ್ ಟಿಸಿ ಬಸ್ ಗಳು ಪಟ್ಟಣದ ಒಳಗಡೆ ಬರದೇ ಬೈಪಾಸ್ ನಲ್ಲಿ ನಿಲ್ಲಿಸುತ್ತಿವೆ. ಇದರಿಂದ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಪಟ್ಟಣದೊಳಗೆ ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು
ಹಿರಿಯೂರಿನಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮದಲ್ಲಿ ಸಿಎಂ ಅವರು ಜನರ ಅಹವಾಲು ಸ್ವೀಕರಿಸಿದರು. ಅನೇಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಕ್ಕೆ ಸೂಚಿಸಿದರು.
ರೈತರು ತಮ್ಮ ಹೊಲಗಳಿಗೆ ಹೋಗಲು ದಾರಿಯಿಲ್ಲದೆ ಪರದಾಡುತ್ತಿದ್ದೇವೆ. ಗರ್ಭಿಣಿಯರು ಬಸ್ ಗಳಿಗಾಗಿ ಹೆದ್ದಾರಿಯ ಬೈಪಾಸ್ ಬಳಿ ಕಾಯುತ್ತಿದ್ದರೂ ಬಸ್ ನಿಲ್ಲಿಸುತ್ತಿಲ್ಲ. ಸ್ವಾಮಿ, ನನಗೆ 85 ವರ್ಷ, ಸ್ವಲ್ಪ ತುಂಡು ಭೂಮಿ ಕೊಡಿ. ಶಾಲಾ ಕಟ್ಟಡವಿಲ್ಲ… ಹೀಗೆ ಹತ್ತಾರು ಜನಸಾಮಾನ್ಯರ ಸಂಕಷ್ಟಗಳು ಸಿಎಂ ಎದುರು ಅನಾವರಣಗೊಂಡವು.








ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)