ವಿಶ್ವ ಪಾರಂಪರಿಕ ತಾಣ, ಕಲೆ, ಸಾಹಿತ್ಯ ಮತ್ತು ಧಾರ್ಮಿಕ ನಂಬಿಕೆಗಳ ಪವಿತ್ರ ಕೇಂದ್ರವಾದ ಹಂಪಿ ಎಂದ ತಕ್ಷಣ ನಮಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸ ಮತ್ತು ಅಲ್ಲಿನ ದೇವಸ್ಥಾನಗಳು. ದೇಶ-ವಿದೇಶಗಳಿಂದ ನಿತ್ಯ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಈ ಐತಿಹಾಸಿಕ ತಾಣಕ್ಕೆ ಭೇಟಿ ನೀಡುತ್ತಾರೆ. ಆದರೆ, ಇತ್ತೀಚೆಗೆ ಇಲ್ಲಿ ನಡೆದ ಒಂದು ಘಟನೆ “ಪವಿತ್ರ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆಯೇ?” ಎಂಬ ಗಂಭೀರ ಪ್ರಶ್ನೆಯನ್ನು ಸಾರ್ವಜನಿಕ ವಲಯದಲ್ಲಿ ಹುಟ್ಟುಹಾಕಿದೆ.
ಘಟನೆಯ ಹಿನ್ನೆಲೆ: ₹20ರ ಬಾಟಲಿಗೆ ಹೆಚ್ವುವರಿ ದರ ಮತ್ತು GSTಯ ಶಾಕ್!
ಇತ್ತೀಚೆಗೆ ಹಂಪಿ ಸಮೀಪದ ಗಂಗಾವತಿ ತಾಲ್ಲೂಕಿನ ಹನುಮನಹಳ್ಳಿ ಪ್ರದೇಶದಲ್ಲಿರುವ ‘ಹಂಪಿ ಎಲ್ಮಾಂಟ್’ (Hampi Elmont) ರೆಸಾರ್ಟ್/ಹೋಟೆಲ್ ಆವರಣದಲ್ಲಿ ಗ್ರಾಹಕರೊಬ್ಬರಿಗೆ ಕಹಿ ಅನುಭವವಾಗಿದೆ. ನಿಯಮಾವಳಿಗಳ ಪ್ರಕಾರ ಯಾವುದೇ ಮುದ್ರಿತ ಗರಿಷ್ಠ ಚಿಲ್ಲರೆ ಬೆಲೆ (MRP) ಹೊಂದಿರುವ ವಸ್ತುವಿನ ಮೇಲೆ ಹೆಚ್ಚುವರಿ ಹಣ ಅಥವಾ ಜಿಎಸ್‌ಟಿ ವಿಧಿಸುವಂತಿಲ್ಲ. ಇದು 4 ಸ್ಟಾರ್, 5 ಸ್ಟಾರ್ ಹೋಟೆಲ್ ಗಳಿಗೆ ವಿನಾಯಿತಿ ಇದೆ. ಆದರೇ ಹಂಪಿ ಎಲ್ಮಾಂಟ್ ರೆಸಾರ್ಟ್ 3 ಸ್ಟಾರ್ ಹೋಟೆಲ್ ಆಗಿದ್ದರೂ ಇಲ್ಲಿ ₹20 ಎಂಆರ್‌ಪಿ ಹೊಂದಿದ್ದ ಕುಡಿಯುವ ನೀರಿನ ಬಾಟಲಿಯನ್ನು ₹25ಕ್ಕೆ ಮಾರಾಟ ಮಾಡಿದ್ದಲ್ಲದೆ, ಅದರ ಮೇಲೆ ಹೆಚ್ಚುವರಿಯಾಗಿ ಜಿಎಸ್‌ಟಿ (GST) ಕೂಡ ವಿಧಿಸಲಾಗಿದೆ ಎಂದು ಗ್ರಾಹಕರು ಗಂಭೀರ ಆರೋಪ ಮಾಡಿದ್ದಾರೆ.
ಕಾನೂನುಬಾಹಿರವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದನ್ನು ಗ್ರಾಹಕರು ಪ್ರಶ್ನಿಸಿದಾಗ, ಅಲ್ಲಿನ ಸಿಬ್ಬಂದಿ ತಪ್ಪು ಒಪ್ಪಿಕೊಳ್ಳುವ ಬದಲು ವಾಗ್ವಾದಕ್ಕೆ ಇಳಿದಿದ್ದಾರೆ. ಗ್ರಾಹಕರೊಂದಿಗೆ ಅತ್ಯಂತ ಅಸಭ್ಯವಾಗಿ ಮತ್ತು ನಿರ್ಲಕ್ಷ್ಯದಿಂದ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದು ಕೇವಲ 5 ರೂಪಾಯಿಯ ವಿಷಯವಲ್ಲ, ಹಕ್ಕುಗಳ ಉಲ್ಲಂಘನೆ!
ಮೇಲ್ನೋಟಕ್ಕೆ ಇದು ಕೇವಲ 5 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಜಿಎಸ್‌ಟಿ ವಸೂಲಿಯ ಸಣ್ಣ ವಿಷಯದಂತೆ ಕಾಣಬಹುದು. ಆದರೆ, ಇದರ ಆಳದಲ್ಲಿ ದೊಡ್ಡದೊಂದು ಶೋಷಣೆಯ ಜಾಲ ಅಡಗಿದೆ. ಕುಡಿಯುವ ನೀರು ಎಂಬುದು ಮನುಷ್ಯನ ಮೂಲಭೂತ ಅಗತ್ಯ. ಇಂತಹ ಅತ್ಯಗತ್ಯ ವಸ್ತುವನ್ನು ಪ್ರವಾಸಿ ತಾಣಗಳಲ್ಲಿ ದುಬಾರಿ ಬೆಲೆಗೆ ಮಾರಿ ವಂಚಿಸುವುದು ಗ್ರಾಹಕ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ.

ಈ ಘಟನೆಯು ಪ್ರವಾಸಿ ವಲಯದಲ್ಲಿ ಹಲವು ತೀಕ್ಷ್ಣ ಪ್ರಶ್ನೆಗಳನ್ನು ಎತ್ತಿದೆ:
- ಧಾರ್ಮಿಕ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಇಂತಹ ಅಕ್ರಮ ವಸೂಲಿಗಳು ಸಾಮಾನ್ಯವಾಗುತ್ತಿವೆಯೇ?
- ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲವೇ?
- ಮಾಹಿತಿ ಇದ್ದರೂ ಇಂತಹ ಹೋಟೆಲ್ ಹಾಗೂ ರೆಸಾರ್ಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದೇಕೆ?
ಪ್ರವಾಸಿ ತಾಣದ ಪ್ರತಿಷ್ಠೆಗೆ ಧಕ್ಕೆ
ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಹಂಪಿಯ ಸೌಂದರ್ಯ ಸವಿಯಲು, ಇತಿಹಾಸ ಅರಿಯಲು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಅತಿಥಿಗಳು. “ಅತಿಥಿ ದೇವೋ ಭವ” ಎಂಬ ಸಂಸ್ಕೃತಿಯ ದೇಶದಲ್ಲಿ, ಕೇವಲ ಧನದಾಹಕ್ಕಾಗಿ ಪ್ರವಾಸಿಗರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಇಡೀ ಪ್ರವಾಸಿ ತಾಣದ ಮತ್ತು ರಾಜ್ಯದ ಪ್ರತಿಷ್ಠೆಗೆ ತರುವ ಬಹುದೊಡ್ಡ ಧಕ್ಕೆಯಾಗಿದೆ. ಹಂಪಿಗೆ ಬಂದು ಇಂತಹ ಕಹಿ ಅನುಭವ ಪಡೆದುಕೊಂಡು ಹೋಗುವ ಪ್ರವಾಸಿಗರು ಹೊರಜಗತ್ತಿಗೆ ನೀಡುವ ಸಂದೇಶ ನಕಾರಾತ್ಮಕವಾಗಿರುತ್ತದೆ.
ಹೋಟೆಲ್ ಮಾಲೀಕರು ಹೇಳೋದೇನು?
ಹೈಕೋರ್ಟ್ ಪ್ರಕರಣವೊಂದರ ಆದೇಶದಲ್ಲಿ ಐಶಾರಾಮಿ ಹೋಟೆಲ್ ಗಳಲ್ಲಿ ಎಂಆರ್ ಪಿ ದರಕ್ಕಿಂತ ಹೆಚ್ಚುವರಿ ದರವನ್ನು ವಸೂಲಿ ಮಾಡಲು ಅವಕಾಶವಿದೆ. ಅದರಂತೆ ನಮ್ಮ ಹೋಟೆಲ್ ಕೂಡ ಸ್ಟಾರ್ ಹೋಟೆಲ್ ಆಗಿದ್ದು, ಕೋರ್ಟ್ ನಿಯಮಾನುಸಾರವೇ ಎಂಆರ್ ಪಿಗಿಂತ ಹೆಚ್ಚಿನ ದರವನ್ನು ವಿಧಿಸಲಾಗುತ್ತಿದೆ. ನಾನು ಕಾನೂನು ಮೀರಿ ಗ್ರಾಹಕರಿಂದ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿಲ್ಲ ಎಂಬುದಾಗಿ ‘ಹಂಪಿ ಎಲ್ಮಾಂಟ್’ (Hampi Elmont) ರೆಸಾರ್ಟ್/ಹೋಟೆಲ್ ಮಾಲೀಕರಾದಂತ ಆನಂದ್ ಕೆಲ್ಲೋಜಿ ಸ್ಪಷ್ಟ ಪಡಿಸಿದ್ದಾರೆ.
ಸಾರ್ವಜನಿಕರ ಆಗ್ರಹ ಮತ್ತು ಅಧಿಕಾರಿಗಳ ಜವಾಬ್ದಾರಿ
ಈ ಘಟನೆಯ ಬಗ್ಗೆ ಸಂಬಂಧಪಟ್ಟ ಆಹಾರ ಇಲಾಖೆ, ಗ್ರಾಹಕ ವೇದಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ಮೇಲಧಿಕಾರಿಗಳು ತಕ್ಷಣವೇ ಈ ಕುರಿತು ತನಿಖೆ ನಡೆಸಬೇಕಿದೆ. ಹಂಪಿ ಸುತ್ತಮುತ್ತಲಿನ ವ್ಯಾಪಾರ ಸಂಸ್ಥೆಗಳು, ಹೋಟೆಲ್‌ಗಳು ನಿಯಮಾನುಸಾರ ಬೆಲೆ ಪಟ್ಟಿಯನ್ನು ಪಾಲಿಸುತ್ತಿವೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸಬೇಕಾಗಿದೆ.
ಹಂಪಿಯಲ್ಲಿ ನಡೆದ ಈ ಘಟನೆ ಒಂದು ಎಚ್ಚರಿಕೆಯ ಗಂಟೆ. ಭಕ್ತರು ಮತ್ತು ಪ್ರವಾಸಿಗರು ಕೇಳುತ್ತಿರುವ ಪ್ರಶ್ನೆ ಒಂದೇ; ವಾಣಿಜ್ಯ ಸಂಸ್ಥೆಗಳ ಲೂಟಿಗೆ ಬ್ರೇಕ್ ಬೀಳುವುದು ಯಾವಾಗ? ಪ್ರವಾಸಿಗರಿಗೆ ಸುರಕ್ಷಿತ ಮತ್ತು ನ್ಯಾಯಯುತ ವಾತಾವರಣ ನಿರ್ಮಿಸುವುದು ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ಸ್ಟಾರ್ ಹೋಟೆಲ್ ಹೆಸರಿನಲ್ಲಿ, ಹೈಕೋರ್ಟ್ ಆದೇಶದ ಹೆಸರಿನಲ್ಲಿ ಅಕ್ರಮ ದರ ವಸೂಲಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.




