ಒಂದು ತಪ್ಪು ನಡೆದಿದೆ, ಆದರೆ ಅದೃಷ್ಟವಶಾತ್ ರಾಮ ಯಾವುದೇ ಅಲ್ಪಸಂಖ್ಯಾತರನ್ನು ಹೊಡೆಯಲಿಲ್ಲ : ನವದೀಪ್‌ ರಿನ್ವಾ

ಲಕ್ನೋ: ಉತ್ತರ ಪ್ರದೇಶದಲ್ಲಿ ಮತದಾರರ ಚೀಟಿಯೊಂದರಲ್ಲಿ ‘ರಾಮ್‌ಹಿತ್ ಯಾದವ್‌’ ಎಂಬ ಹೆಸರು ‘ರಾಮ್‌ ನೇ ಯಾದವ್‌ ಕೋ ಮಾರಾ’ ಎಂದು ತಪ್ಪಾಗಿ ಮುದ್ರಣಗೊಂಡಿತ್ತು. ಇದನ್ನು ಪ್ರಶ್ನಿಸಿ ಆಪ್‌ ಸಂಸದ ಸಂಜಯ್‌ ಸಿಂಗ್‌, ‘ನಿಮ್ಮ ಕಂಪ್ಯೂಟರ್‌ ಜಾತಿವಾದಿಯೇ?’ ಎಂದು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ಈ ಆರೋಪಕ್ಕೆ ವ್ಯಂಗ್ಯವಾಗಿ ಉತ್ತರಿಸಿರುವ ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್‌ ರಿನ್ವಾ, ಒಂದು ತಪ್ಪು ನಡೆದಿದೆ. ಆದರೆ ಅದೃಷ್ಟವಶಾತ್ ರಾಮ ಯಾವುದೇ ಅಲ್ಪಸಂಖ್ಯಾತರನ್ನು ಹೊಡೆಯಲಿಲ್ಲ. ಇಲ್ಲದಿದ್ದರೆ ನಮ್ಮ ಮೇಲೆ ಜಾತಿವಾದದ ಜೊತೆಗೆ ಕೋಮುವಾದದ ಆರೋಪವೂ ಬರುತ್ತಿತ್ತು ಎಂದು ಹೇಳಿದ್ದಾರೆ. ಇದು ಆಪ್‌ ಸೇರಿ ವಿವಿಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ಎಕ್ಸ್’ನಲ್ಲಿ ಉತ್ತರಿಸಿರುವ ರಿನ್ವಾ, ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಕಂಡುಬಂದ ಮತ್ತೊಂದು ದೋಷವನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಮತದಾರರೊಬ್ಬರ ತಂದೆಯ ಹೆಸರನ್ನು “ರಾಮ್ ನೇ ಶರ್ಮಾ ಕೋ ಮಾರಾ” (Ram ne Sharma ko Maara – ಅಂದರೆ ‘ರಾಮ್ ಶರ್ಮಾನನ್ನು ಹೊಡೆದನು’) ಎಂದು ತಪ್ಪಾಗಿ ದಾಖಲಿಸಲಾಗಿತ್ತು.

“ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ‘ರಾಮ್ ನೇ ಶರ್ಮಾ ಕೋ ಮಾರಾ’ ಎಂಬ ವಿಚಿತ್ರ ಹೆಸರೂ ಕಂಡುಬಂದಿದೆ. ಕಂಪ್ಯೂಟರ್‌ಗಳು ಅಥವಾ ಸಾಫ್ಟ್‌ವೇರ್‌ಗಳಿಗೆ ಜಾತಿವಾದ ಇರುವುದಿಲ್ಲ,” ಎಂದು ರಿನ್ವಾ ಹೇಳಿದ್ದಾರೆ.

ತಪ್ಪು ನಡೆದಿರುವುದನ್ನು ಒಪ್ಪಿಕೊಂಡಿರುವ ಉತ್ತರ ಪ್ರದೇಶದ ಸಿಇಒ, “ನಮ್ಮಿಂದ ತಪ್ಪಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅದೃಷ್ಟವಶಾತ್, ಈ ತಪ್ಪು ಸಂಭವಿಸಿದಾಗ ಯಾವುದೇ ಜಾತಿ ತಾರತಮ್ಯ ನಡೆದಿಲ್ಲ. ದೇವರ ಕೃಪೆಯಿಂದ, ‘ರಾಮ್’ ಯಾವುದೇ ಅಲ್ಪಸಂಖ್ಯಾತ ವ್ಯಕ್ತಿಯನ್ನು ಹೊಡೆದಿಲ್ಲ! ಇಲ್ಲದಿದ್ದರೆ, ನಾವು ಜಾತಿವಾದದ ಆರೋಪದ ಜೊತೆಗೆ ಕೋಮು ಪ್ರಚೋದನೆಯ ಆರೋಪವನ್ನೂ ಎದುರಿಸಬೇಕಾಗುತ್ತಿತ್ತು,” ಎಂದು ತಿಳಿಸಿದ್ದಾರೆ.

ಮತದಾರರ ಚೀಟಿಯೊಂದರಲ್ಲಿ “ರಾಮ್‌ಹಿತ್ ಯಾದವ್” (Ram hit Yadav) ಎಂಬ ಹೆಸರನ್ನು “ರಾಮ್ ನೇ ಯಾದವ್ ಕೋ ಮಾರಾ” (Ram ne Yadav ko Maara – ಅಂದರೆ ‘ರಾಮ್ ಯಾದವ್‌ನನ್ನು ಹೊಡೆದನು’) ಎಂದು ತಪ್ಪಾಗಿ ನಮೂದಿಸಲಾಗಿತ್ತು.

ಈ ಸಂಬಂಧ ‘ಎಕ್ಸ್’ (X) ಜಾಲತಾಣದಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಎಎಪಿ ಮುಖಂಡ ಸಂಜಯ್ ಸಿಂಗ್, “ಜ್ಞಾನೇಶ್ ಕುಮಾರ್ ಅವರೇ, ರಾಮ್ ಕೇವಲ ಯಾದವ್‌ನನ್ನೇ ಏಕೆ ಹೊಡೆದನು? ರಾಮ್ ಸಿಂಗ್, ಪಾಠಕ್, ಅಸ್ಥಾನಾ, ಶರ್ಮಾ, ರೈ ಅಥವಾ ಬಿಷ್ಟ್ ಅವರನ್ನು ಏಕೆ ಹೊಡೆಯಲಿಲ್ಲ? ನಿಮ್ಮ ಕಂಪ್ಯೂಟರ್ ಜಾತಿವಾದಿಯೇ? ನೀವು ಯಾವುದಾದರೂ ರಾಜಕೀಯ ಪಕ್ಷದ ಅಜೆಂಡಾವನ್ನು ಜಾರಿಗೊಳಿಸುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.

Share it :

Leave a Reply

Your email address will not be published. Required fields are marked *