ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು: ಕೇಂದ್ರ ಸಚಿವ HDK ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾತಿನಲ್ಲಿ ಸ್ಪಷ್ಟತೆಯಿಲ್ಲ, ಅವರದ್ದು “ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.

​ಕುಮಾರಸ್ವಾಮಿಯವರ ರಾಜಕೀಯ ನಿಲುವುಗಳನ್ನು ಪ್ರಶ್ನಿಸಿರುವ ಅವರು, ನಿನ್ನೆ, ಮೊನ್ನೆ ಏನು ಮಾತನಾಡಿದ್ದೆ ಮತ್ತು ಇಂದು, ನಾಳೆ ಏನು ಮಾತನಾಡುತ್ತೇನೆ ಎಂಬ ಯಾವುದೇ ಸ್ಪಷ್ಟತೆ ಸ್ವತಃ ಕುಮಾರಸ್ವಾಮಿ ಅವರಿಗೇ ಇಲ್ಲ. ಸಿಎಂ ಸಿದ್ದರಾಮಯ್ಯ ಅವರ ವಿಷಯವನ್ನು ಮುಂದಿಟ್ಟುಕೊಂಡು ಒಮ್ಮೆ ಮುಖ್ಯಮಂತ್ರಿಗಳ ಕಡೆ, ಮತ್ತೊಮ್ಮೆ ಸಚಿವ ಜಮೀರ್ ಅಹಮದ್ ಕಡೆ, ಇನ್ನೊಮ್ಮೆ ಖರ್ಗೆ ಕುಟುಂಬದ ಕಡೆ ಬೆರಳು ತೋರಿಸುತ್ತಿದ್ದಾರೆ. ಕಂಡವರ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವುದನ್ನು ಮನೆಮುರುಕತನ ಎನ್ನುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಸಿದ್ದರಾಮಯ್ಯನವರನ್ನು ಹೆಚ್ಚು ಅವಮಾನಿಸಿದ್ದೇ ಕುಮಾರಸ್ವಾಮಿ:

ರಾಜ್ಯ ರಾಜಕೀಯ ಇತಿಹಾಸವನ್ನು ಪ್ರಸ್ತಾಪಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದವರು ಮತ್ತು ಅವರನ್ನು ಅತಿ ಹೆಚ್ಚು ಅವಮಾನಿಸಿದವರು ಯಾರಾದರೂ ಇದ್ದರೆ ಅದು ಹೆಚ್.ಡಿ. ಕುಮಾರಸ್ವಾಮಿ ಮಾತ್ರ. ಸಿದ್ದರಾಮಯ್ಯನವರ ರಾಜಕೀಯ ಜೀವನದುದ್ದಕ್ಕೂ ಎಡೆಬಿಡದೆ ಕಾಡಿದವರು, ಇದೀಗ ನಮ್ಮ ಕುಟುಂಬದ (ಖರ್ಗೆ ಕುಟುಂಬದ) ಕಡೆಗೆ ತಿರುಗಿದ್ದಾರೆ ಎಂದು ಆರೋಪಿಸಿದ್ದಾರೆ.

​ಐಟಿ ಸೆಲ್ ಹಾಗೂ ಅಮೆರಿಕ ಭೇಟಿ ಕುರಿತು ಸರಣಿ ಪ್ರಶ್ನೆಗಳು:

ಇದೇ ವೇಳೆ ಕುಮಾರಸ್ವಾಮಿಯವರಿಗೆ ಹಲವು ನೇರ ಪ್ರಶ್ನೆಗಳನ್ನು ಎಸೆದಿರುವ ಪ್ರಿಯಾಂಕ್ ಖರ್ಗೆ:

  • ​ನಿಮ್ಮ ಐಟಿ ಸೆಲ್‌ನ ಹುಡುಗರು ತನಿಖಾ ವಿಚಾರಣೆಗೆ ಹಾಜರಾಗುತ್ತಿಲ್ಲವೇಕೆ?
  • ​ಸ್ಟಿಂಗ್ ವಿಡಿಯೋ ಬಹಿರಂಗಪಡಿಸುವಲ್ಲಿ ನಮ್ಮವರ ಪಾತ್ರವಿಲ್ಲ ಎಂದು ಧೈರ್ಯವಾಗಿ ಹೇಳುವ ನೈತಿಕತೆಯನ್ನು ತೋರುತ್ತಿಲ್ಲವೇಕೆ?
  • ​ವಿಡಿಯೋ ಅಪ್‌ಲೋಡ್ ಮಾಡಿದ್ದನ್ನು ವಿರೋಧಿಸದೇ ಮೌನವಾಗಿರುವುದೇಕೆ?
  • ​ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ತೆರಳಿ ನಡೆಸಿದ ಷಡ್ಯಂತ್ರವೇನು? ಎಂದು ಪ್ರಶ್ನಿಸಿದ್ದಾರೆ.

​ಸ್ವತಃ ತಮ್ಮ ಸ್ವಂತ ಸಹೋದರನ ಕುಟುಂಬದ ಬೆಳವಣಿಗೆಯನ್ನೇ ಸಹಿಸದ ಕುಮಾರಸ್ವಾಮಿಯವರು ಇತರರನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಕುಮಾರಸ್ವಾಮಿಯವರು ಇನ್ನಾದರೂ ಮಾತಿನಲ್ಲಿ ಘನತೆ, ಸತ್ಯ ಹೇಳುವ ಗುಣ ಹಾಗೂ ನಡತೆಯಲ್ಲಿ ತೂಕವನ್ನು ಬೆಳೆಸಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ

Share it :

Leave a Reply

Your email address will not be published. Required fields are marked *