ಉತ್ತರ ಪ್ರದೇಶ: ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಯಿಂದ ಪಾರಾಗಲು ವ್ಯಕ್ತಿಯೊಬ್ಬ ತನ್ನದೇ ಸಾವಿನ ಕಟ್ಟುಕಥೆ ಸೃಷ್ಟಿಸಿ, ತನ್ನ ಬದಲಿಗೆ ಮೇಕೆಯ ಕಳೇಬರವನ್ನು ಸುಟ್ಟು, ನಕಲಿ ಮರಣ ಪ್ರಮಾಣಪತ್ರ ಪಡೆದಿದ್ದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯ ಪತ್ನಿ ಈ ನಕಲಿ ಮರಣ ಪ್ರಮಾಣಪತ್ರ ಬಳಸಿ ವಿಮಾ ಕಂಪನಿಯಿಂದ ಬರೋಬ್ಬರಿ 10 ಲಕ್ಷ ರೂಪಾಯಿ ಪರಿಹಾರ ಪಡೆದುಕೊಂಡಿದ್ದರೆ, ಅಧಿಕೃತ ದಾಖಲೆಗಳಲ್ಲಿ ‘ಮೃತಪಟ್ಟಿದ್ದ’ ಆರೋಪಿ ಮಾತ್ರ ಇದೇ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ (18 ತಿಂಗಳು) ರಾಜಾರೋಷವಾಗಿ ವಾಸಿಸುತ್ತಾ ಷೇರು ಮಾರುಕಟ್ಟೆ ಹಾಗೂ ಕ್ರಿಪ್ಟೋಕರೆನ್ಸಿ ದಂಧೆ ನಡೆಸುತ್ತಿದ್ದನು!
ಜೀವಾವಧಿ ಶಿಕ್ಷೆಯ ಭೀತಿಯಿಂದ ಬೃಹತ್ ಸಂಚು
ಖ್ವಾಜಹಾನ್ಪುರ ನಿವಾಸಿ 38 ವರ್ಷದ ರಾಜ್ಕುಮಾರ್ ರಾಜ್ಭರ್ ಅಲಿಯಾಸ್ ರಾಜು ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಈತ 2016ರಲ್ಲಿ ನಡೆದ ಇಟ್ಟಿಗೆ ಭಟ್ಟಿ ಮಾಲೀಕ ಯೋಗೇಶ್ ಸಿಂಗ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಪ್ರಕರಣದ ನ್ಯಾಯಾಲಯ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದ್ದು, ತನಗೆ ಜೀವಾವಧಿ ಶಿಕ್ಷೆ ಖಚಿತವೆಂದು ಅರಿತ ರಾಜ್ಕುಮಾರ್, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ತಾನು ಸತ್ತಿರುವುದಾಗಿ ಬಿಂಬಿಸಲು ಸಂಚು ರೂಪಿಸಿದ್ದನು.
ಚಿತೆಯ ಮೇಲೆ ಮೇಕೆಯ ಕಳೇಬರವಿಟ್ಟು ಅಂತ್ಯಕ್ರಿಯೆ!
ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಮೊದಲು ತನಗೆ ಪ್ರಜ್ಞೆ ತಪ್ಪಿದಂತೆ ನಟಿಸಿದ್ದು, ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದರು. ನಂತರ ಚಿತೆಯ ಮೇಲೆ ಆತನ ಮೃತದೇಹ ಮಲಗಿರುವಂತೆ ಬಿಂಬಿಸುವ ನಕಲಿ ಫೋಟೋಗಳನ್ನು ಎಡಿಟ್ ಮಾಡಿ ಸಿದ್ಧಪಡಿಸಲಾಯಿತು.
ಅಂತ್ಯಕ್ರಿಯೆಯ ದಿನದಂದು ರಾತ್ರಿಯ ಕತ್ತಲಿನಲ್ಲಿ ಆತನನ್ನು ರಹಸ್ಯವಾಗಿ ಚಿತೆಯಿಂದ ಪಾರುಮಾಡಿದ ಕುಟುಂಬಸ್ಥರು, ಆತನ ಜಾಗದಲ್ಲಿ ಮೇಕೆಯ ಕಳೇಬರವನ್ನು ಇಟ್ಟು ಸುಟ್ಟು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಇಡೀ ನಾಟಕವನ್ನು ನೈಜವೆಂದು ಬಿಂಬಿಸಲು, ಸಾವಿನ 13ನೇ ದಿನದಂದು ಆಯೋಜಿಸುವ ಉತ್ತರಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿ ಊರಿನವರಿಗೆ ಊಟವನ್ನೂ ಹಾಕಿಸಿದ್ದರು!
ಗಾಜಿಪುರದಿಂದ ನಕಲಿ ಡೆತ್ ಸರ್ಟಿಫಿಕೇಟ್, 10 ಲಕ್ಷ ವಿಮೆ ಜಮೆ
ಸಿದ್ಧಪಡಿಸಲಾದ ನಕಲಿ ದಾಖಲೆಗಳು ಮತ್ತು ತಿರುಚಿದ ಫೋಟೋಗಳನ್ನು ಆಧರಿಸಿ ಉತ್ತರ ಪ್ರದೇಶದ ಗಾಜಿಪುರದಿಂದ ನಕಲಿ ಮರಣ ಪ್ರಮಾಣಪತ್ರವನ್ನು ಪಡೆದುಕೊಳ್ಳಲಾಯಿತು. ಈ ನಕಲಿ ಸರ್ಟಿಫಿಕೇಟ್ ಬಳಸಿ ಆರೋಪಿಯ ಪತ್ನಿ ವಿಮಾ ಕಂಪನಿಯಿಂದ ಬರೋಬ್ಬರಿ 10 ಲಕ್ಷ ರೂಪಾಯಿ ಪರಿಹಾರದ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದಳು.
ಕ್ರಿಪ್ಟೋಕರೆನ್ಸಿ ದಂಧೆ: 18 ತಿಂಗಳ ಬಳಿಕ ಬಂಡವಾಳ ಬಯಲು
ಮೂಲ ಕೊಲೆ ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರಿಗೆ, ಅಧಿಕೃತವಾಗಿ ಸತ್ತುಹೋಗಿದ್ದಾನೆ ಎನ್ನಲಾದ ರಾಜ್ಕುಮಾರ್ ಕಳೆದ 18 ತಿಂಗಳುಗಳಿಂದ ಇದೇ ಜಿಲ್ಲೆಯಲ್ಲಿ ಜೀವಂತವಾಗಿದ್ದುಕೊಂಡು ಷೇರು ಮಾರುಕಟ್ಟೆ ಮತ್ತು ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ನಲ್ಲಿ ಸಕ್ರಿಯವಾಗಿರುವ ಮಾಹಿತಿ ಸಿಕ್ಕಿದೆ. ಈತನ ವ್ಯವಹಾರಗಳಲ್ಲಿ ಇಬ್ಬರು ಹೋಮಿಯೋಪತಿ ವೈದ್ಯರ ಹೂಡಿಕೆಯೂ ಇರುವುದು ಬೆಳಕಿಗೆ ಬಂದಿದ್ದು, ಈ ಸಂಚಿನಲ್ಲಿ ಅವರ ಪಾತ್ರದ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಠಿಣ ಕಾನೂನು ಕ್ರಮಕ್ಕೆ ಪೊಲೀಸರ ಸಿದ್ಧತೆ
ಈ ಕೃತ್ಯದಲ್ಲಿ ಪತ್ನಿಯ ಪಾತ್ರ, ಫೋಟೋ ಎಡಿಟ್ ಮಾಡಿದವರು ಹಾಗೂ ನಕಲಿ ಮರಣ ಪ್ರಮಾಣಪತ್ರ ನೀಡಿದ ಅಧಿಕಾರಿಗಳ ವಿರುದ್ಧವೂ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಸಿಟಿ ಸರ್ಕಲ್ ಆಫೀಸರ್ ನಿತೇಶ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಆರೋಪಿಯನ್ನು ಮೂಲ ಕೊಲೆ ಪ್ರಕರಣದಲ್ಲಿ ಕೋರ್ಟ್ಗೆ ಹಾಜರುಪಡಿಸಲಾಗುತ್ತಿದ್ದು, ನಕಲಿ ದಾಖಲೆ ಸೃಷ್ಟಿ ಹಾಗೂ ವಿಮಾ ವಂಚನೆ ಸಂಬಂಧ ಪ್ರತ್ಯೇಕ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.





