1 ಬಿಲಿಯನ್ ಡಾಲರ್ ಗಡಿ ದಾಟಿದ ಅಮೆಜಾನ್ ನೌ ವಾರ್ಷಿಕ ಮಾರಾಟದ ವಹಿವಾಟು

ಬೆಂಗಳೂರು: ಅಮೆಜಾನ್‌ನ ಅತಿ ವೇಗದ ವಿತರಣಾ ಸೇವೆ ‘ಅಮೆಜಾನ್ ನೌ’ ಭಾರತದಲ್ಲಿ ಕಳೆದ ಮೂರು ತಿಂಗಳ ಅವಧಿಯ ಆಧಾರದ ಮೇಲೆ ವಾರ್ಷಿಕೀಕೃತ ಒಟ್ಟು ಮಾರಾಟದಲ್ಲಿ 1 ಬಿಲಿಯನ್ ಡಾಲರ್ ಗಡಿ ದಾಟಿದೆ.

ಸೇವೆ ಆರಂಭವಾದಾಗಿನಿಂದ ಪ್ರತಿ ತ್ರೈಮಾಸಿಕದಲ್ಲೂ ಆರ್ಡರ್‌ಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಅಮೆಜಾನ್ ಇಂಡಿಯಾದ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಘಟಕವಾಗಿ ‘ಅಮೆಜಾನ್ ನೌ’ ಹೊರಹೊಮ್ಮಿದೆ.

ಕೇವಲ 10 ವಾರಗಳಲ್ಲಿ ಸೇವೆಯನ್ನು 4 ಪಟ್ಟು ಹೆಚ್ಚು ನಗರಗಳಿಗೆ ವಿಸ್ತರಿಸಲಾಗಿದ್ದು, ದೇಶದ 60ಕ್ಕೂ ಅಧಿಕ ನಗರಗಳು ಹಾಗೂ ಪಟ್ಟಣಗಳ ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ಉತ್ಪನ್ನಗಳ ವಿತರಣೆ ಲಭ್ಯವಾಗುತ್ತಿದೆ. ಮೆಟ್ರೋ ನಗರಗಳ ಜೊತೆಗೆ ಪಡುಬಿದ್ರಿ, ತಿರುಪತಿ, ಗುಂಟೂರು, ಗುರುದಾಸ್ಪುರ, ಜಲಂಧರ್, ವೆಲ್ಲೂರು, ಧಾರವಾಡ, ವಾರಂಗಲ್ ಹಾಗೂ ಬರ್ಹಂಪುರ ಸೇರಿದಂತೆ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ಸೇವೆ ವಿಸ್ತರಿಸಲಾಗಿದೆ.

ಅಮೆಜಾನ್ ನೌ ಮೂಲಕ ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸಲು 750ಕ್ಕೂ ಅಧಿಕ ಮೈಕ್ರೋ-ಫುಲ್‌ಫಿಲ್‌ಮೆಂಟ್ ಮತ್ತು ನಗರ ಫುಲ್‌ಫಿಲ್‌ಮೆಂಟ್ ಕೇಂದ್ರಗಳ ವಿಶೇಷ ಜಾಲವನ್ನು ನಿರ್ಮಿಸಲಾಗಿದೆ. ದೀಪಾವಳಿಯ ವೇಳೆಗೆ ಸೇವೆಯನ್ನು 100 ನಗರಗಳಿಗೆ ವಿಸ್ತರಿಸುವ ಗುರಿಯನ್ನು ಕಂಪನಿ ಹೊಂದಿದೆ.

“ಕಡಿಮೆ ಅವಧಿಯಲ್ಲೇ ಅಮೆಜಾನ್ ನೌ ಭಾರತದಲ್ಲಿ 1 ಬಿಲಿಯನ್ ಡಾಲರ್ ವಾರ್ಷಿಕೀಕೃತ ಒಟ್ಟು ಮಾರಾಟದ ಗಡಿ ದಾಟಿದೆ. ಪ್ರತಿ ತ್ರೈಮಾಸಿಕದಲ್ಲೂ ಆರ್ಡರ್‌ಗಳು ದುಪ್ಪಟ್ಟಾಗುತ್ತಿರುವುದು ಗ್ರಾಹಕರ ಉತ್ತಮ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ದೀಪಾವಳಿಯ ವೇಳೆಗೆ 100 ನಗರಗಳಿಗೆ ಸೇವೆ ವಿಸ್ತರಿಸುವ ಗುರಿ ಹೊಂದಿದ್ದೇವೆ,” ಎಂದು ಅಮೆಜಾನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ತಿಳಿಸಿದ್ದಾರೆ.

ಜೂನ್ 2026ರಲ್ಲಿ ಅಮೆಜಾನ್, ದೇಶದ ಅತಿ ದೊಡ್ಡ ‘ಕೆಲವೇ ನಿಮಿಷಗಳಲ್ಲಿ ವಿತರಣೆ’ ಜಾಲವನ್ನು ನಿರ್ಮಿಸುವ ಉದ್ದೇಶದಿಂದ ಅಮೆಜಾನ್ ನೌ ಸೇವೆಯನ್ನು 300ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಪ್ರಕಟಿಸಿತ್ತು.

ಅಮೆಜಾನ್ ನೌನಲ್ಲಿ ದಿನನಿತ್ಯದ ಅಗತ್ಯ ವಸ್ತುಗಳಾದ ದಿನಸಿ, ಹಣ್ಣು–ತರಕಾರಿ, ಫ್ರೋಜನ್ ಆಹಾರ, ವೈಯಕ್ತಿಕ ಆರೈಕೆ ಉತ್ಪನ್ನಗಳು, ಫ್ಯಾಷನ್ ಮತ್ತು ಬ್ಯೂಟಿ ಉತ್ಪನ್ನಗಳು, ಸಣ್ಣ ಗೃಹೋಪಯೋಗಿ ಉಪಕರಣಗಳು, ಹೋಮ್ ಮತ್ತು ಕಿಚನ್ ಉತ್ಪನ್ನಗಳು ಸೇರಿದಂತೆ ಹಲವು ವಸ್ತುಗಳು ಲಭ್ಯವಿದ್ದು, ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ತಲುಪಿಸಲಾಗುತ್ತದೆ.

ಅಮೆಜಾನ್ ಇಂಡಿಯಾದಲ್ಲಿ ಮಾರಾಟಗಾರರು ನೀಡುವ ಉತ್ಪನ್ನಗಳ ಪೈಕಿ ಹತ್ತಾರು ಸಾವಿರ ಉತ್ಪನ್ನಗಳನ್ನು ಕೆಲವೇ ನಿಮಿಷಗಳಲ್ಲಿ ಅಥವಾ ಕೆಲವೇ ಗಂಟೆಗಳಲ್ಲಿ, 10 ಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ಅದೇ ದಿನ, 40 ಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ಮರುದಿನ ತಲುಪಿಸುವ ವ್ಯವಸ್ಥೆಯೂ ಇದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others