Amit Shah – ವೋಟ್ ಬ್ಯಾಂಕ್ ಆಸೆಗೆ ಬಿದ್ದು ಕಾಂಗ್ರೆಸ್ ವಂದೇ ಮಾತರಂ ಅನ್ನು ಮರೆತಿದೆ: ಅಮಿತ್‌ ಶಾ ವಾಗ್ದಾಳಿ

ಜೈಪುರ: ಕೈ ಪಕ್ಷವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರೀಯ ಗೀತೆಗೆ ವಂದೇ ಮಾತರಂಗೆ ಅಪಮಾನ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವೋಟ್ ಬ್ಯಾಂಕ್ ಆಸೆಗೆ ಬಿದ್ದು ಕಾಂಗ್ರೆಸ್ ವಂದೇ ಮಾತರಂ ಅನ್ನು ಮರೆತಿದೆ ಎಂದು ಆರೋಪಿಸಿದ ಗೃಹ ಸಚಿವರು, ರಾಷ್ಟ್ರೀಯ ಗೀತೆಗೆ ಮಾಡಿದ ಅಪಮಾನಕ್ಕಾಗಿ ಕಾಂಗ್ರೆಸ್ ಪಕ್ಷವು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ವಂದೇ ಮಾತರಂ ಗೀತೆ ಹಾಡಲಾಗುತ್ತಿತ್ತು. ಆ ಸಮಯದಲ್ಲಿ ಸೋನಿಯಾ ಗಾಂಧಿ ಅವರು ಗಾಯನವನ್ನು ನಿಲ್ಲಿಸುವಂತೆ ಕಾಂಗ್ರೆಸ್ ಅಧ್ಯಕ್ಷರಿಗೆ ಹೇಳಿದರು. ನಾವೆಲ್ಲರೂ ಇದನ್ನು ಟಿವಿಯಲ್ಲಿ ನೋಡಿದ್ದೇವೆ ಎಂದರು.

ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವಿಡಿಯೊ ತುಣುಕನ್ನು ಬಿಜೆಪಿ ಹಂಚಿಕೊಂಡ ನಂತರ ಈ ವಿವಾದ ಭುಗಿಲೆದ್ದಿದೆ. ವಂದೇ ಮಾತರಂ ಗಾಯನದ ವೇಳೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ನೇರವಾಗಿ ಸೋನಿಯಾ ಗಾಂಧಿಯವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸೋನಿಯಾ ಜೀ, ದೇಶದ 140 ಕೋಟಿ ಜನ ನಿಮ್ಮನ್ನು ಗಮನಿಸುತ್ತಿದ್ದಾರೆ. ನೀವು ಮಾಡಿರುವ ಈ ಪಾಪವನ್ನು ಈ ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಂದೇ ಮಾತರಂ ಗೀತೆಯನ್ನು ಅಪೂರ್ಣವಾಗಿ ಬಿಡುವುದನ್ನು ಯಾರಾದರೂ ಕಲ್ಪಿಸಿಕೊಳ್ಳಲು ಸಾಧ್ಯವೇ? ಇದಕ್ಕಾಗಿ ಕಾಂಗ್ರೆಸ್‌ನವರು ನಾಚಿಕೆಪಡಬೇಕು ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ವಂದೇ ಮಾತರಂ ಹಾಡುತ್ತಿದ್ದ ವೇಳೆ ಅದನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಿಗೆ ಸೂಚಿಸಿದ್ದಾರೆ ಎಂದು ಆರೋಪಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others