ಜೂನ್.21ರಂದು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ಅಧಿಕಾರ ಸ್ವೀಕಾರ

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಆಡಳಿತಾತ್ಮಕ ಪುನರ್ರಚನೆಯಾಗಿದ್ದು, ಹಿರಿಯ ರಾಜಕಾರಣಿ ಬಿ.ಕೆ. ಹರಿಪ್ರಸಾದ್ ಅವರು ಜೂನ್ 21ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ಹಿನ್ನೆಲೆಯಲ್ಲಿ, ಖಾಲಿಯಿದ್ದ ಪಕ್ಷದ ಅತ್ಯುನ್ನತ ಹುದ್ದೆಗೆ ದೆಹಲಿ ಹೈಕಮಾಂಡ್ ಜೂನ್ ಮೊದಲ ವಾರದಲ್ಲೇ ಹರಿಪ್ರಸಾದ್ ಅವರ ಹೆಸರನ್ನು ಘೋಷಿಸಿತ್ತು. ಇದೀಗ ಜೂನ್ 21ರಂದು ನಡೆಯಲಿರುವ ಭವ್ಯ ಸಮಾರಂಭದಲ್ಲಿ ಅವರು ಅಧಿಕಾರ ಸೂತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಪಕ್ಷ ಸಂಘಟನೆಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್

ಮುಂಬರುವ ಚುನಾವಣಾ ಸವಾಲುಗಳನ್ನು ಎದುರಿಸಲು ಕಾಂಗ್ರೆಸ್ ನಾಯಕತ್ವವು ರಾಜ್ಯದಲ್ಲಿ ಮೂರು ಹಂತದ ನಾಯಕತ್ವದ ಸೂತ್ರವನ್ನು ಅಳವಡಿಸಿಕೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣವಾಗಿ ಸರ್ಕಾರದ ಆಡಳಿತ ಯಂತ್ರದ ಕಡೆಗೆ ಗಮನಹರಿಸಲಿದ್ದರೆ, ಸಂಘಟನಾ ಚತುರ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯಾದ್ಯಂತ ಪಕ್ಷವನ್ನು ಬಲಪಡಿಸುವ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸುವ ಹೊಣೆ ಹೊತ್ತಿದ್ದಾರೆ. ಇವರಿಗೆ ಮಾರ್ಗದರ್ಶಕರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಹಾಗೂ ಸದ್ಧಾಂತಿಕ ಬೆಂಬಲ ನೀಡಲಿದ್ದಾರೆ.

ಹಿರಿಯ ಅನುಭವಿಗೆ ಒಲಿದ ಅದೃಷ್ಟ

ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಪಕ್ಷವನ್ನು ಮುನ್ನಡೆಸಿದ ಅಪಾರ ಅನುಭವ ಹರಿಪ್ರಸಾದ್ ಅವರಿಗಿದೆ. ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರ ಹೆಸರುಗಳು ಮುಂಚೂಣಿಯಲ್ಲಿದ್ದರೂ, ಹೈಕಮಾಂಡ್ ಅಂತಿಮವಾಗಿ ಗಾಂಧಿ ಕುಟುಂಬದ ನಿಷ್ಠಾವಂತ ನಾಯಕರನ್ನೇ ಆಯ್ಕೆ ಮಾಡಿದೆ. ಈ ಮೂಲಕ ಮಾಜಿ ಸಿಎಂ ಎಸ್. ಬಂಗಾರಪ್ಪ ಹಾಗೂ ಬಿ. ಜನಾರ್ದನ ಪೂಜಾರಿ ಅವರ ನಂತರ ಕೆಪಿಸಿಸಿ ಸಾರಥ್ಯ ವಹಿಸುತ್ತಿರುವ ಬಿಲ್ಲವ ಸಮುದಾಯದ ಮೂರನೇ ಪ್ರಮುಖ ನಾಯಕರಾಗಿ ಬಿ.ಕೆ. ಹರಿಪ್ರಸಾದ್ ಗುರುತಿಸಿಕೊಂಡಿದ್ದಾರೆ.

ಜೂನ್ 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಸಾಕ್ಷಿಯಾಗಲಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post