ವಾಷಿಂಗ್ಟನ್: ಉಕ್ರೇನ್ ಮೇಲಿನ ಯುದ್ಧಕ್ಕೆ ಧನಸಹಾಯ ನೀಡುತ್ತಿರುವ ರಷ್ಯಾದ ಆದಾಯದ ಮೂಲಗಳಿಗೆ ಸಂಪೂರ್ಣವಾಗಿ ಪೆಟ್ಟು ನೀಡಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಆರ್ಥಿಕ ನಿರ್ಬಂಧಗಳ ಕಾಯ್ದೆಗೆ ಸಹಿ ಹಾಕಿದ್ದಾರೆ.
ರಷ್ಯಾ ವಿರುದ್ಧ ವ್ಯಾಪಕ ಹೊಸ ನಿರ್ಬಂಧಗಳನ್ನು ವಿಧಿಸಲು ಅಧಿಕಾರ ನೀಡುವ ಮಸೂದೆಗೆ ಟ್ರಂಪ್ ಅವರು ಸಹಿ ಹಾಕಿದ್ದಾರೆ. ಈ ವಾರ ಅಮೆರಿಕದ ಕಾಂಗ್ರೆಸ್‌ನಲ್ಲಿ ಮಸೂದೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಟ್ರಂಪ್ ಸಹಿ ಮಾಡಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದೆ.ರಿಪಬ್ಲಿಕನ್ ಪಕ್ಷದ ನೇತೃತ್ವದ ಅಮೆರಿಕದ ಪ್ರತಿನಿಧಿಗಳ ಸಭೆ ಬುಧವಾರ 262-159 ಮತಗಳ ಅಂತರದಲ್ಲಿ ಮಸೂದೆಯನ್ನು ಅಂಗೀಕರಿಸಿತ್ತು.
ರಷ್ಯಾದ ಸೇನೆಗೆ ಬೆಂಬಲ ನೀಡುವ ಕಂಪನಿಗಳು ಮತ್ತು ವಿದೇಶಿ ಸಂಸ್ಥೆಗಳ ಮೇಲೂ ನಿರ್ಬಂಧ ವಿಧಿಸಲು ಮಸೂದೆ ಅವಕಾಶ ನೀಡುತ್ತಿದ್ದು,ಇರಾನ್‌ಗೆ ಸಂಬಂಧಿಸಿದ ಕೆಲವು ನಿರ್ಬಂಧಗಳನ್ನೂ ವಿಸ್ತರಿಸುವ ಅಂಶಗಳು ಇದರಲ್ಲಿವೆ. ಆದರೆ, ಇತರ ದೇಶಗಳೊಂದಿಗೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಟ್ರಂಪ್ ಅವರಿಗೆ ವ್ಯಾಪಕ ಅಧಿಕಾರ ನೀಡುವ ವಿಚಾರವು ಡೆಮಾಕ್ರಟಿಕ್ ಪಕ್ಷದೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.
ಡೆಮೋಕ್ರಾಟ್‌ಗಳು ಬಹುತೇಕ ಉಕ್ರೇನ್‌ಗೆ ಬೆಂಬಲ ನೀಡುತ್ತಿದ್ದರೂ, ಟ್ರಂಪ್ ಅವರಿಗೆ ವ್ಯಾಪಾರ ನೀತಿಯಲ್ಲಿ ಹೆಚ್ಚಿನ ಅಧಿಕಾರ ನೀಡುವುದನ್ನು ಕೆಲವರು ವಿರೋಧಿಸಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳನ್ನು ತಪ್ಪಿಸಲು ಬಳಸಲಾಗುತ್ತಿದೆ ಎನ್ನಲಾದ ರಷ್ಯಾದ ‘ನೌಕಾಪಡೆ’ಯ ತೈಲ ಸಾಗಣೆ ಟ್ಯಾಂಕರ್‌ಗಳ ಮೇಲೂ ಕ್ರಮ ಕೈಗೊಳ್ಳಲು ಮಸೂದೆ ಅವಕಾಶ ನೀಡುತ್ತದೆ. ಅಲ್ಲದೆ, ರಷ್ಯಾದ ತೈಲ ಮತ್ತು ಅನಿಲವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸುವ ಅಧಿಕಾರವನ್ನು ಟ್ರಂಪ್ ಅವರಿಗೆ ನೀಡುತ್ತದೆ.
ಈ ಕ್ರಮದ ವ್ಯಾಪ್ತಿಗೆ ಚೀನಾ ಮತ್ತು ಭಾರತವೂ ಒಳಪಡಬಹುದಾಗಿದೆ. ಇದರ ಮೂಲಕ ರಷ್ಯಾದ ಯುದ್ಧಕ್ಕೆ ಹಣಕಾಸು ಒದಗಿಸುವ ಪ್ರಮುಖ ಆದಾಯ ಮೂಲಗಳನ್ನು ಕಡಿತಗೊಳಿಸುವ ಪ್ರಯತ್ನವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.ರಷ್ಯಾದ ಇಂಧನ ಮತ್ತು ರಕ್ಷಣಾ ವಲಯಗಳ ಜತೆಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಇತರ ಹಿರಿಯ ಅಧಿಕಾರಿಗಳನ್ನೂ ಈ ಮಸೂದೆ ಗುರಿಯಾಗಿಸಿಕೊಂಡಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೆಪ್ಟೆಂಬರ್ 24ರಂದು ಅಮೆರಿಕಕ್ಕೆ ಭೇಟಿ ನೀಡಿ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಆದ್ರೆ ಜಿನ್‌ಪಿಂಗ್ ಭೇಟಿಗು ಮುನ್ನವೇ ಟ್ರಂಪ್ ನಿರ್ಬಂಧಗಳ ಮಸೂದೆಗೆ ಸಹಿ ಹಾಕಿರುವುದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.





