30 ಲಕ್ಷ ಇನ್ಶೂರೆನ್ಸ್ ಹಣಕ್ಕಾಗಿ ಸ್ವಂತ ತಮ್ಮನನ್ನೇ ಸುಪಾರಿ ಕೊಟ್ಟು ಕೊಂದ ಅಣ್ಣ

ತುಮಕೂರು: ಜೀವ ವಿಮೆಯ (LIC) ಬೃಹತ್ ಮೊತ್ತವನ್ನು ದೋಚಲು ಅಣ್ಣನೇ ಹಂತಕರೊಂದಿಗೆ ಕೈಜೋಡಿಸಿ ಸ್ವಂತ ತಮ್ಮನ ಪ್ರಾಣ ತೆಗೆದಿರುವ ಆಘಾತಕಾರಿ ಘಟನೆ ಜಿಲ್ಲೆಯ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ರಸ್ತೆ ಅಪಘಾತದಂತೆ ಕಾಣುತ್ತಿದ್ದ ಪ್ರಕರಣವನ್ನು ಆಳವಾಗಿ ತನಿಖೆ ನಡೆಸಿದ ಪೊಲೀಸರು, ಇದೊಂದು ವ್ಯವಸ್ಥಿತ ಕೊಲೆ ಎಂಬುದನ್ನು ಪತ್ತೆ ಹಚ್ಚಿ ಅಣ್ಣ ಸೇರಿದಂತೆ ನಾಲ್ವರು ಆರೋಪಿಗಳನ್ನು ಕಟಕಟೆಗೆ ತಳ್ಳಿದ್ದಾರೆ.

ತಮ್ಮನ ಹೆಸರಲ್ಲಿ 15 ಲಕ್ಷದ ಪಾಲಿಸಿ; ನಾಮಿನಿ ಅಣ್ಣ!

ಆಂಧ್ರ ಮೂಲದ ರಮೇಶ್ (35) ಕೊಲೆಯಾದ ದುರ್ದೈವಿ. ಈತ ಬೆಂಗಳೂರು ಹಾಗೂ ಮಂಡ್ಯದಲ್ಲಿ ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದ. ಹೆಂಡತಿಯಿಂದ ದೂರವಿದ್ದ ರಮೇಶ್ ಇತ್ತೀಚೆಗೆ ಮಾಟ-ಮಂತ್ರದ ಕಡೆಗೆ ವಾಲಿದ್ದ. ಇದನ್ನೇ ಸಂಚಿಗೆ ದಾಳವಾಗಿಸಿಕೊಂಡ ಅಣ್ಣ ಹನುಮಂತರಾಜು, ತಮ್ಮನ ಹೆಸರಿನಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಎಲ್‌ಐಸಿ ಪಾಲಿಸಿ ಮಾಡಿಸಿದ್ದ. ವರ್ಷಕ್ಕೆ 85,000 ರೂಪಾಯಿ ಪ್ರೀಮಿಯಂ ಅನ್ನು ತಾನೇ ಪಾವತಿಸುತ್ತಿದ್ದ ಹನುಮಂತರಾಜು, ಪಾಲಿಸಿಗೆ ತನ್ನ ಹೆಸರನ್ನೇ ನಾಮಿನಿ ಮಾಡಿಕೊಂಡಿದ್ದ. ಅಪಘಾತದಲ್ಲಿ ಪಾಲಿಸಿದಾರ ಮೃತಪಟ್ಟರೆ ನಾಮಿನಿಗೆ ದುಪ್ಪಟ್ಟು ಅಂದರೆ 30 ಲಕ್ಷ ರೂಪಾಯಿ ಹಣ ಸಿಗುತ್ತದೆ ಎಂಬ ನಿಯಮವೇ ಈ ಭೀಕರ ಕೃತ್ಯಕ್ಕೆ ಪ್ರೇರಣೆಯಾಗಿತ್ತು.

ನಿಧಿ ಪೂಜೆಯ ಆಮಿಷವೊಡ್ಡಿ ಇನ್ಶೂರೆನ್ಸ್ ಹತ್ಯೆ

ಹಣದ ಆಸೆಗೆ ಬಿದ್ದ ಹನುಮಂತರಾಜು, ಬೆಂಗಳೂರಿನ ತನ್ನ ಪರಿಚಯಸ್ಥರಾದ ಲಕ್ಷ್ಮೀಕಾಂತ, ನವೀನ್ ಹಾಗೂ ಎಂ.ಡಿ.ಜಿಲಾನ್ ಎಂಬುವವರ ಜೊತೆ ಸೇರಿ ಹತ್ಯೆಗೆ ಸ್ಕೆಚ್ ಹಾಕಿದ್ದ. ಕಳೆದ ಜೂನ್ 19ರಂದು “ನಿಧಿ ಸಿಗುವ ಪೂಜೆ ಇದೆ” ಎಂದು ನಂಬಿಸಿ ರಮೇಶ್‌ನನ್ನು ಶಿರಾ-ಅಮರಾಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಹೊಂಚು ಹಾಕಿ ಕುಳಿತಿದ್ದ ಹಂತಕರು ಮೊದಲು ದೊಣ್ಣೆಗಳಿಂದ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಪಘಾತದ ರೂಪ ನೀಡಲು ಮೈಮೇಲೆ ಕಾರು ಹರಿಸಿದ್ದಾರೆ. ಆದರೂ ಉಸಿರಾಡುತ್ತಿದ್ದ ತಮ್ಮನನ್ನು ಕೊನೆಗೆ ಬ್ಯಾಟರಿ ಜಂಪಿಂಗ್ ವೈರ್‌ನಿಂದ ಕುತ್ತಿಗೆ ಬಿಗಿದು ಕ್ರೂರವಾಗಿ ಕೊಂದಿದ್ದಾರೆ.

ಹಿಟ್ ಅಂಡ್ ರನ್ ನಾಟಕ ಆಡಿದ್ದ ಹಂತಕರು

ಕೃತ್ಯ ಎಸಗಿದ ಬಳಿಕ ರಮೇಶ್ ಶವ ಹಾಗೂ ಆತನ ಬೈಕನ್ನು ರಸ್ತೆಯಲ್ಲೇ ಬಿಟ್ಟಿದ್ದ ಹಂತಕರು, ಇದೊಂದು ಹಿಟ್ ಅಂಡ್ ರನ್ ಪ್ರಕರಣ ಎಂದು ಬಿಂಬಿಸಲು ಬೈಕಿನ ಮುಂಭಾಗವನ್ನು ತಾವೇ ಜಖಂ ಮಾಡಿ ಪರಾರಿಯಾಗಿದ್ದರು. ಮರುದಿನ ರಸ್ತೆಯಲ್ಲಿ ಶವ ಸಿಕ್ಕಾಗ ಮತ್ತೊಬ್ಬ ಸೋದರ ರಂಗನಾಥ್ ನೀಡಿದ ದೂರಿನ ಮೇರೆಗೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಘಟನೆಯ ತನಿಖೆಗಾಗಿ ರಚನೆಯಾಗಿದ್ದ 3 ವಿಶೇಷ ಪೊಲೀಸ್ ತಂಡಗಳು ತಾಂತ್ರಿಕ ಹಾಗೂ ಸ್ಥಳೀಯ ಸಾಕ್ಷ್ಯಗಳನ್ನು ಕಲೆಹಾಕಿದಾಗ, ಅಪಘಾತದ ಕಥೆ ಕಟ್ಟಿದ್ದ ಅಣ್ಣ ಹನುಮಂತರಾಜು ಹಾಗೂ ಆತನ ಮೂವರು ಸಹಚರರ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಸದ್ಯ ನಾಲ್ವರೂ ಹಂತಕರು ಕಂಬಿ ಎಣಿಸುತ್ತಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others