ಸಿಎಜಿ ಆಡಿಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಯ ಬೃಹತ್ ಎಡವಟ್ಟು ಬಹಿರಂಗ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ‘ಗೃಹಲಕ್ಷ್ಮಿ’ ಯೋಜನೆಯ ನಗದು ವರ್ಗಾವಣೆ ಪ್ರಕ್ರಿಯೆಯಲ್ಲಿ ಸರಣಿ ಗೊಂದಲಗಳು ಹಾಗೂ ಗಂಭೀರ ಆರ್ಥಿಕ ದೋಷಗಳು ಉಂಟಾಗಿರುವುದನ್ನು ಭಾರತೀಯ ಲೆಕ್ಕ ನಿಯಂತ್ರಕರು ಮತ್ತು ಮಹಾ ಪರಿಶೋಧಕರು (CAG) ಬಹಿರಂಗಪಡಿಸಿದ್ದಾರೆ. ಸರ್ಕಾರದ ಪ್ರಮುಖ ಆರ್ಥಿಕ ಸೌಲಭ್ಯದ ಆಡಿಟಿಂಗ್ ನಡೆಸಿದ ಸಿಎಜಿ, ವ್ಯವಸ್ಥೆಯಲ್ಲಿನ ಲೋಪಗಳನ್ನು ಪಟ್ಟಿ ಮಾಡಿ ತನಿಖೆಗೆ ಆದೇಶಿಸಿದೆ.

ಅಸ್ತಿತ್ವದಲ್ಲೇ ಇರದ ಖಾತೆಗಳಿಗೆ ಹರಿದ ಕೋಟ್ಯಂತರ ರೂಪಾಯಿ!

ಯೋಜನೆಯ ಡಿಬಿಟಿ (ನೇರ ನಗದು ವರ್ಗಾವಣೆ) ವ್ಯವಸ್ಥೆಯಲ್ಲಿನ ಅತ್ಯಂತ ವಿಚಿತ್ರ ಮತ್ತು ಗಂಭೀರ ತಪ್ಪು ಈ ವರದಿಯಿಂದ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಯಾವುದೇ ಅಧಿಕೃತ ಬ್ಯಾಂಕ್ ಖಾತೆಯನ್ನೇ ಹೊಂದಿರದ ಸುಮಾರು 23,262 ಫಲಾನುಭವಿಗಳ ಖಾತೆಗೆ ನಿಯಮಬಾಹಿರವಾಗಿ ಹಣ ತಲುಪಿದೆ. ಈ ರೀತಿ ಬ್ಯಾಂಕ್ ದಾಖಲೆಗಳೇ ಇಲ್ಲದವರ ಹೆಸರಿನಲ್ಲಿ ಬರೋಬ್ಬರಿ 60.69 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದ್ದು, ಇಷ್ಟು ದೊಡ್ಡ ಮೊತ್ತ ಯಾರ ಪಾಲಾಗಿದೆ ಎಂಬ ಆತಂಕ ಸೃಷ್ಟಿಸಿದೆ.

10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗಳಲ್ಲಿ ಗೊಂದಲ

ವರದಿಯ ಪ್ರಕಾರ, ಸೌಲಭ್ಯ ಪಡೆಯುತ್ತಿರುವ ಮಹಿಳೆಯರಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿರುವವರು ತಮಗೆ ಹಣ ಜಮೆಯಾಗುವ ಖಾತೆಗಳನ್ನು ಪದೇ ಪದೇ ಬದಲಾಯಿಸುತ್ತಿದ್ದಾರೆ. ಇಂತಹ ಸರಣಿ ಖಾತೆ ಬದಲಾವಣೆಯ ಪ್ರಕ್ರಿಯೆಯಲ್ಲಿರುವ ಸುಮಾರು 10,06,308 ಬ್ಯಾಂಕ್ ಖಾತೆಗಳನ್ನು ಸಿಎಜಿ ಪತ್ತೆ ಮಾಡಿದ್ದು, ಇವುಗಳ ಸೂಕ್ತ ಪರಿಶೀಲನೆ ನಡೆಸಲು ಸೂಚಿಸಿದೆ.

ಅರ್ಹರಲ್ಲದವರ ಪಟ್ಟಿ ಮುಚ್ಚಿಟ್ಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಆಡಿಟ್ ಸಂಸ್ಥೆಗೆ ನಿಖರ ಮಾಹಿತಿ ನೀಡುವಲ್ಲಿ ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ ಎಂದು ಸಿಎಜಿ ಅಸಮಾಧಾನ ವ್ಯಕ್ತಪಡಿಸಿದೆ. ಯೋಜನೆಯ ನಿಯಮಗಳಿಗೆ ಒಳಪಡದ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯಿಂದ ಇದುವರೆಗೆ ಎಷ್ಟು ಜನರನ್ನು ಕೈಬಿಡಲಾಗಿದೆ ಎಂಬ ಪ್ರಮುಖ ದತ್ತಾಂಶ ಹಾಗೂ ಅಧಿಕೃತ ವಿವರಗಳನ್ನು ಇಲಾಖೆಯು ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಕ್ಷಣವೇ ಲೋಪ ಸರಿಪಡಿಸಲು ಸಿಎಜಿ ಖಡಕ್ ಆದೇಶ

ಸಾರ್ವಜನಿಕರ ತೆರಿಗೆ ಹಣ ಅರ್ಹರಲ್ಲದವರ ಕೈಸೇರುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ (CAG), ಈ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪದೋಷಗಳ ವಿರುದ್ಧ ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದ ಬೊಕ್ಕಸ ದುರುಪಯೋಗವಾಗುವುದನ್ನು ತಡೆಯಲು ತ್ವರಿತವಾಗಿ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others