ಬರ ನಿರ್ವಹಣೆ ಬಗ್ಗೆ ಸಿಎಂ ಡಿಕೆಶಿ, ಡಿಸಿಎಂ ಪರಂ ವಿಡಿಯೋ ಕಾನ್ಫರೆನ್ಸ್

ಬೆಂಗಳೂರು: ಬರ ನಿರ್ವಹಣೆ ವಿಚಾರದ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಮತ್ತು ಡಿಸಿಎಂ ಡಾ. ಜಿ. ಪರಮೇಶ್ವರ್​​ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಸಿ, ಸಿಇಒಗಳ ಜತೆ ಸಭೆ ನಡೆಸಿದರು.

ಎಲ್ಲಾ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು.ಕೇವಲ ಪೇಪರ್​ ವರದಿ ನೀಡಿದರೆ ನಾನು ಕೇಳುವುದಿಲ್ಲ. ನನಗೆ ಫೀಲ್ಡ್​ ರಿಪೋರ್ಟ್​ ಮುಖ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್​ ಸಭೆಯಲ್ಲಿ ಖಡಕ್​​ ಸೂಚನೆ ನೀಡಿದ್ದಾರೆ.

ಟೀಮ್​ ಕರ್ನಾಟಕ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಕಾರ್ಯಕ್ಷಮತೆ ತೋರಿಸುತ್ತಿರುವ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದವರು ಹೇಳಿದ್ದಾರೆ.ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ನಿಮ್ಮ ಅನುಭವ ಮತ್ತು ಕಾರ್ಯಕ್ಷಮತೆ ತೋರಿಸಿ, ಆಡಳಿತಾತ್ಮಕವಾಗಿ ಟೀಮ್‌ ವರ್ಕ್‌ ಮಾಡಿ. ಈಗಾಗಲೇ ಬೆಳಗಾವಿ ಮತ್ತು ಕಲಬುರಗಿ ವಿಭಾಗ ಮಟ್ಟದಲ್ಲಿ ಸಭೆ ನಡೆಸಿ ಸಮಗ್ರ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ನಾನು ಕೊಟ್ಟಿರುವ ಸೂಚನೆಗಳು ಕಾಲ ಮಿತಿಯಲ್ಲಿ ಜಾರಿಯಾಗುತ್ತಿವೆ ಎಂದರು.

ಬರ ಪರಿಸ್ಥಿತಿ ಬಗ್ಗೆ ಡಿಸಿಎಂ ಪರಮೇಶ್ವರ್ ಸೂಚನೆ ನೀಡುತ್ತಿದ್ದ ವೇಳೆ ಕೆಲ ಅಧಿಕಾರಿಗಳು ಮೊಬೈಲ್​​ ಫೋನ್​​ ಬಳಕೆ ಮಾಡುತ್ತಿದ್ದ ಕಾರಣ ಸಿಎಂ ಡಿಕೆಶಿ ಗರಂ ಆದ ಪ್ರಸಂಗ ನಡೆದಿದೆ. ಸರ್ಕಾರದ ಆಲೋಚನೆ ತಿಳಿಸುವಾಗ ಗೌರವ ನೀಡುವುದು ನಿಮ್ಮ ಜವಬ್ದಾರಿ. ನಿಮಗೆ ಏನಾದರೂ ಅರ್ಜೆಂಟ್ ಇದ್ರೆ ಹೊರಗೆ ಹೋಗಿ‌ ಮಾತಾಡಿ ಎಂದು ಹೇಳಿದರು.

ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್​​ ಪ್ರಮುಖವಾಗಿ 2 ಸೂಚನೆ ನೀಡಿದ್ದಾರೆ. ಅಡಿಕೆಗೆ 15-20 ದಿನ ನೀರಿಲ್ಲದಿದ್ದರೆ ತೋಟಗಳು ಒಣಗಿ ಹೋಗುತ್ತವೆ. ರಾಜ್ಯದ ಬೆಳೆಗಳ ಚಿತ್ರಣವನ್ನ ಗಮನಿಸಿದರೆ, ಕಬ್ಬು, ಭತ್ತ, ಅಡಿಕೆ ಮತ್ತು ಮುಸುಕಿನ ಜೋಳಗಳು ಒಟ್ಟಾರೆ ಶೇ.50 ರಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿವೆ. ಈ 4 ಬೆಳೆಗಳು ಅತಿ ಹೆಚ್ಚಿನ ನೀರನ್ನು ಬೇಡುತ್ತವೆ. ಈ ಕುರಿತು ನೀವು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಮತ್ತು ಎಚ್ಚರ ವಹಿಸಬೇಕು. 2023ರ ಬರದ ವೇಳೆ ಬೆಳೆಯೇನೊ ಬೆಳೆದಿತ್ತು ಆದರೆ ಸಕಾಲದಲ್ಲಿ ಮಳೆ ಕಾಣದೆ ರೈತನಿಗೇನೂ ಸಿಗಲಿಲ್ಲ. ಕೋವಿಡ್ ನಂತರದ ಅವಧಿಯಲ್ಲಿ ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಪ್ರಮಾಣ ಹೆಚ್ಚಾಗಿದೆ. ಅಡಿಕೆಯಂತಹ ಬೆಳೆಗಳು ತೋಟಗಾರಿಕಾ ಬೆಳೆಗಳಲ್ಲಿ ಮೊನೊಪೋಲಿ ಸಾಧಿಸುತ್ತಿವೆ. ಡ್ಯಾಂಗಳಿOದ ನೀರು ಹರಿಸಿ ಎಂದು ಒತ್ತಾಯಗಳು ಬರುತ್ತವೆ. ಆದರೆ ಮುಂದಿನ ಜೂನ್‌ವರೆಗೆ ಕುಡಿಯುವ ನೀರನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ನಿಮ್ಮ ಮೇಲಿರುತ್ತದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.

ಬರಗಾಲದ ಸಂದರ್ಭಗಳಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತವೆ. ಅವುಗಳ ಬಗ್ಗೆ ಗಮನವಿರಲಿ. ಎಲ್ಲಿಯೂ ಸಹ ಬೀಜ, ಗೊಬ್ಬರಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಮಾಧ್ಯಮಗಳು ತಪ್ಪು ವರದಿ ಮಾಡಿದರೆ ಸತ್ಯಾಂಶವೇನೆಂದು ಕೂಡಲೇ ಸ್ಪಷ್ಟೀಕರಣ ನೀಡಬೇಕು ಜನ ಗುಳೇ ಹೋಗುವ ಗ್ರಾಮಗಳನ್ನು ಗುರುತಿಸಿ ಅಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ದೊರೆಯುವಂತೆ ಮಾಡುವ ಮೂಲಕ ವಲಸೆಯನ್ನು ತಪ್ಪಿಸಬಹುದಾಗಿದೆ. ಸಾವಿರಾರು ಮಕ್ಕಳು ಶಾಲೆಗೆ ಹೋಗದೆ ವಲಸೆ ಹೋಗುತ್ತಿದ್ದಾರೆಂದು ಪತ್ರಿಕೆಗಳು ವರದಿ ಮಾಡುತ್ತಿವೆ, ಈ ಕುರಿತು ನಿಗಾವಹಿಸಿ ಎಂದವರು ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *