ಹೈದರಾಬಾದ್: ಇಲ್ಲಿನ ಪ್ರಸಿದ್ಧ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಅವರು ಸೋಮವಾರ ನಾಂಪಲ್ಲಿ ಕೋರ್ಟ್‌ಗೆ ವರ್ಚುವಲ್ ಆಗಿ ವಿಚಾರಣೆಗೆ ಹಾಜರಾಗಿದ್ದಾರೆ.
ಸದ್ಯ ಸಿನಿಮಾ ಶೂಟಿಂಗ್ ನಿಮಿತ್ತ ಮುಂಬೈನಲ್ಲಿರುವ ಕಾರಣ, ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ಅನುಮತಿ ನೀಡಿತ್ತು. ಅದರಂತೆ ಅಲ್ಲು ಅರ್ಜುನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು.
ಮುಂದಿನ ವಿಚಾರಣೆ ಜುಲೈ 29ಕ್ಕೆ ಮುಂದೂಡಿಕೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೋಮವಾರ) ಕೆಲವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ಕೋರ್ಟ್ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ.
ಈ ಪ್ರಕರಣದಲ್ಲಿ ಒಟ್ಟು 23 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದ್ದು, ಅವರ ವಿರುದ್ಧ ಸುಮಾರು 500 ಪುಟಗಳ ಸುದೀರ್ಘ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಪ್ರತಿಗಳನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.





