“ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” – ಈ ಒಂದು ವಾಕ್ಯ ಭಾರತದ ಕೋಟ್ಯಂತರ ಜನರ ರಕ್ತವನ್ನು ಕುದಿಸಿತು. ಇಂದು ಆಗಸ್ಟ್ 18, ಆಜಾದ್ ಹಿಂದ್ ಫೌಜ್‌ನ ಸಂಸ್ಥಾಪಕ, ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆ. ಅವರನ್ನು ನೆನೆಯುವ ಈ ದಿನ, 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಭಾರತ, ನೇತಾಜಿ ತೋರಿಸಿದ “ಸಶಸ್ತ್ರ ಹೋರಾಟದ” ದಾರಿಯನ್ನು ಮತ್ತೊಮ್ಮೆ ಅವಲೋಕಿಸಬೇಕಾಗಿದೆ.
ಒಬ್ಬ ಅಸಾಮಾನ್ಯ ದೇಶಭಕ್ತ ನೇತಾಜಿ 1897ರ ಜನವರಿ 23ರಂದು ಒಡಿಶಾದ ಕಟಕ್‌ನಲ್ಲಿ ಜನಿಸಿದರು ಸುಭಾಸ್ ಚಂದ್ರ ಬೋಸ್, ಬ್ರಿಟಿಷರ ಆಡಳಿತದಲ್ಲಿ ಐ ಸಿ ಎಸ್ ಅಧಿಕಾರಿಯಾಗುವ ಅವಕಾಶವನ್ನು ತ್ಯಜಿಸಿದರು. “ನನ್ನ ದೇಶ ಗುಲಾಮನಾಗಿರುವಾಗ ನಾನು ಬ್ರಿಟಿಷರಿಗೆ ಸೇವೆ ಮಾಡಲಾರೆ” ಎಂದು ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಕಾಂಗ್ರೆಸ್ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾದರೂ, ಗಾಂಧೀಜಿಯವರ ಅಹಿಂಸಾ ನೀತಿಯೊಂದಿಗೆ ಭಿನ್ನಾಭಿಪ್ರಾಯ ಬಂದಾಗ ರಾಜೀನಾಮೆ ನೀಡಿದರು.
ನೇತಾಜಿಯವರಿಗೆ ಒಂದು ವಿಷಯದಲ್ಲಿ ಸ್ಪಷ್ಟತೆ ಇತ್ತು “ಸ್ವಾತಂತ್ರ್ಯವನ್ನು ಬೇಡಿ ಪಡೆಯಲು ಆಗುವುದಿಲ್ಲ, ಅದನ್ನು ಕಿತ್ತುಕೊಳ್ಳಬೇಕು.” 1941ರಲ್ಲಿ ಬ್ರಿಟಿಷರ ಕಣ್ಣು ತಪ್ಪಿಸಿ ದೇಶದಿಂದ ಪಲಾಯನ ಮಾಡಿದ ಅವರು, ಮೊದಲು ಜರ್ಮನಿಗೆ, ನಂತರ ಜಪಾನ್‌ಗೆ ಹೋದರು. ಉದ್ದೇಶ ಒಂದೇ ವಿದೇಶದಲ್ಲಿರುವ ಭಾರತೀಯರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟುವುದು.
ಭಾರತೀಯರ ಹೆಮ್ಮೆಯ ಸೈನ್ಯ ಆಜಾದ್ ಹಿಂದ್ ಫೌಜ್.1943ರಲ್ಲಿ ಸಿಂಗಾಪುರದಲ್ಲಿ ನೆತಾಜಿ ಆಜಾದ್ ಹಿಂದ್ ಫೌಜ್ ಅಥವಾ “ಇಂಡಿಯನ್ ನ್ಯಾಷನಲ್ ಆರ್ಮಿ”ಯ ಸುಪ್ರೀಂ ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದರು. “ದಿಲ್ಲಿ ಚಲೋ” ಎಂದು ಘೋಷಣೆ ಮಾಡಿದರು. ಮಹಿಳೆಯರಿಗಾಗಿಯೇ “ರಾಣಿ ಝಾನ್ಸಿ ರೆಜಿಮೆಂಟ್” ರಚಿಸಿದರು. ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಬಂದೂಕು ಹಿಡಿದರು.
ನೇತಾಜಿ ನೀಡಿದ “ಜೈ ಹಿಂದ್” ಘೋಷಣೆ ಇಂದಿಗೂ ಭಾರತೀಯ ಸೇನೆಯ ಪ್ರಾಣಮಂತ್ರ. “ತುಮ್ ಮುಜೆ ಖೂನ್ ದೋ, ಮೈ ತುಮ್ಹೆ ಆಜಾದಿ ದೂಂಗಾ” ಎಂಬ ಕರೆಗೆ ಸ್ಪಂದಿಸಿ ಮಲೇಷ್ಯಾ, ಬರ್ಮಾ, ಸಿಂಗಾಪುರದಲ್ಲಿದ್ದ ಲಕ್ಷಾಂತರ ಭಾರತೀಯರು ತಮ್ಮ ಚಿನ್ನ, ಹಣವನ್ನು ದಾನ ಮಾಡಿದರು.
1944ರಲ್ಲಿ ಆಜಾದ್ ಹಿಂದ್ ಫೌಜ್ ಭಾರತದ ಗಡಿ ದಾಟಿ ಕೊಹಿಮಾ, ಇಂಫಾಲ್‌ವರೆಗೆ ಬಂತು. ಮದ್ದುಗುಂಡು, ಆಹಾರದ ಕೊರತೆಯಿಂದ ಹಿಂದಕ್ಕೆ ಬರಬೇಕಾಯಿತು. ಆದರೆ ಆ ಸೋಲು ಭಾರತೀಯರ ಮನಸ್ಸಿನಲ್ಲಿ ಗೆಲುವಿನ ಬೀಜ ಬಿತ್ತಿತು. 1945ರಲ್ಲಿ ಬ್ರಿಟಿಷರು ಇಂಡಿಯನ್ ನ್ಯಾಸಿನಲ್ ಆರ್ಮಿ ಯೋಧರ ಮೇಲೆ ದೆಹಲಿಯಲ್ಲಿ ವಿಚಾರಣೆ ನಡೆಸಿದಾಗ, ಇಡೀ ದೇಶ ಬೀದಿಗೆ ಬಂತು. ನಾವಿಕರ ದಂಗೆ, ವಿದ್ಯಾರ್ಥಿಗಳ ಪ್ರತಿಭಟನೆ ಎಲ್ಲದಕ್ಕೂ ಕಾರಣ ಐ ಏನ್ ಎ ವಿಚಾರಣೆ. ಬ್ರಿಟಿಷರಿಗೆ ಅರ್ಥವಾಯಿತು: “ಇನ್ನು ಭಾರತವನ್ನು ಆಳಲು ಆಗುವುದಿಲ್ಲ”. ಇತಿಹಾಸಕಾರರು ಹೇಳುವಂತೆ, ಐ ಏನ್ ಎ ಯೇ ಬ್ರಿಟಿಷರು ಭಾರತ ಬಿಟ್ಟು ಹೋಗಲು ಪ್ರಮುಖ ಕಾರಣಗಳಲ್ಲಿ ಒಂದು.
18 ಆಗಸ್ಟ್ 1945 ರಂದು ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟರು ಎಂದು ಅಧಿಕೃತವಾಗಿ ಹೇಳಲಾಗಿದೆ. ಆದರೆ ಈ ಬಗ್ಗೆ ಇಂದಿಗೂ ಹಲವು ಅನುಮಾನಗಳಿವೆ. “ನೇತಾಜಿ ಬದುಕಿದ್ದಾರಾ?” ಎಂಬ ಪ್ರಶ್ನೆ ಇಂದಿಗೂ ಕೋಟ್ಯಂತರ ಭಾರತೀಯರನ್ನು ಕಾಡುತ್ತದೆ. ಆದರೆ ದೇಹ ಸತ್ತರೂ ವಿಚಾರ ಸಾಯುವುದಿಲ್ಲ. ನೇತಾಜಿ ನಮಗೆ ಕೊಟ್ಟ ಮೂರು ದೊಡ್ಡ ಪಾಠಗಳಿವೆ.ಧೈರ್ಯ “ಸ್ವಾತಂತ್ರ್ಯಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಿ”
ಸಂಘಟನೆ. ಧರ್ಮ, ಜಾತಿ, ಭಾಷೆ ಮರೆತು ಎಲ್ಲಾ ಭಾರತೀಯರನ್ನು ಒಂದು ಸೈನ್ಯದಡಿ ತಂದರು. ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ “ಆಜಾದ್ ಹಿಂದ್” ಎಂದು ಒಂದೇ ಸಮವಸ್ತ್ರ ಧರಿಸಿದರು.
ಆಧುನಿಕ ಭಾರತದ ಕನಸು.ಸ್ವಾತಂತ್ರ್ಯದ ನಂತರ ಭಾರತ ಕೈಗಾರಿಕೆ, ವಿಜ್ಞಾನ, ಕೃಷಿಯಲ್ಲಿ ಸ್ವಾವಲಂಬಿಯಾಗಬೇಕು ಎಂದು ಕನಸು ಕಂಡರು.
ಇಂದಿನ ಭಾರತಕ್ಕೆ ನೆತಾಜಿಯ ಸಂದೇಶವಾಗಿದ್ದು, 2026ರಲ್ಲಿ ನಾವು 80ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಆದರೆ ನೇತಾಜಿ ಬಯಸಿದ “ಸಂಪೂರ್ಣ ಸ್ವಾತಂತ್ರ್ಯ” ಸಿಕ್ಕಿದೆಯೇ? ನೇತಾಜಿ ಹೇಳುತ್ತಿದ್ದರು “ರಾಜಕೀಯ ಸ್ವಾತಂತ್ರ್ಯವೇ ಅಂತಿಮವಲ್ಲ. ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಸ್ವಾತಂತ್ರ್ಯವೂ ಬೇಕು.” ಇಂದು ನಮ್ಮ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಗಡಿಯಲ್ಲಿ ಯೋಧರು ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ನಾವು ಇನ್ನೂ ಸುಳ್ಳು ಸುದ್ದಿ, ಮೌಢ್ಯದ ವಿರುದ್ಧ ಹೋರಾಡುತ್ತಿದ್ದೇವೆ.
ನೇತಾಜಿಯ “ಆಜಾದ್ ಹಿಂದ್” ಎಂಬುದು ಕೇವಲ ಸೈನ್ಯದ ಹೆಸರಾಗಿರಲಿಲ್ಲ. ಅದು ಒಂದು ಮನಸ್ಥಿತಿ. “ನಾನು, ನನ್ನ ಕುಟುಂಬ” ಎಂಬುದನ್ನು ಮರೆತು “ನನ್ನ ದೇಶ” ಎಂದು ಯೋಚಿಸುವ ಮನಸ್ಥಿತಿ.
ಇಂದಿನ ಯುವಕರಿಗೆ ನೇತಾಜಿ ಸ್ಪೂರ್ತಿ. ಏಕೆಂದರೆ ಅವರು ಕೇವಲ ಮಾತಾಡಲಿಲ್ಲ, ಮಾಡಿ ತೋರಿಸಿದರು. ಐ ಸಿ ಎಸ್ ತ್ಯಜಿಸಿದರು. ಸುಖದ ಜೀವನ ತ್ಯಜಿಸಿದರು. ಕುಟುಂಬ ತ್ಯಜಿಸಿದರು. ಎಲ್ಲವನ್ನೂ ದೇಶಕ್ಕಾಗಿ ತ್ಯಜಿಸಿದರು. ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ “ಜೈ ಹಿಂದ್” ಘೋಷಣೆ ಕೇಳುತ್ತದೆ. ಆ ಘೋಷಣೆಯ ಸೃಷ್ಟಿಕರ್ತ ನೇತಾಜಿ ಎಂಬುದನ್ನು ನಾವು ಮರೆಯಬಾರದು.
ನೇತಾಜಿ ಒಮ್ಮೆ ಹೇಳಿದ್ದರು: “ನನ್ನನ್ನು ನೆನೆಯಬೇಡಿ. ನನ್ನ ವಿಚಾರಗಳನ್ನು ಜೀವಂತವಾಗಿರಿಸಿ.” 80ನೇ ಸ್ವಾತಂತ್ರ್ಯ ವರ್ಷದಲ್ಲಿ ನಾವು ಮಾಡಬೇಕಾದ್ದು ಒಂದೇ: ಪ್ರತಿ ಶಾಲೆಯಲ್ಲಿ ಒಬ್ಬ “ನೇತಾಜಿ” ಸೃಷ್ಟಿಯಾಗಬೇಕು. ಪ್ರತಿ ಗ್ರಾಮದಲ್ಲಿ “ಆಜಾದ್ ಹಿಂದ್” ಮನೋಭಾವ ಮೂಡಬೇಕು. ಭ್ರಷ್ಟಾಚಾರ, ಅಸಮಾನತೆ, ನಿರುದ್ಯೋಗದ ವಿರುದ್ಧ ನಾವು ಕೂಡ ಒಂದು “ಆಜಾದ್ ಹಿಂದ್ ಫೌಜ್” ಕಟ್ಟಬೇಕು. ಪುಣ್ಯಸ್ಮರಣೆಯಂದು ಕೋಟಿ ಕೋಟಿ ನಮನಗಳು ನೇತಾಜಿ ನಿಮ್ಮ “ಜೈ ಹಿಂದ್” ಇಂದಿಗೂ ನಮ್ಮ ಹೃದಯದ ಬಡಿತದಲ್ಲಿದೆ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.





