ಹಾವುಗಳು ಪ್ರಕೃತಿಯನ್ನು ರಕ್ಷಣೆ ಮಾಡುತ್ತವೆಯೇ? ಹಾಗಾದ್ರೆ ಹಾವಿನ ಪಾತ್ರವೇನು? ಇಲ್ಲಿದೆ ನೋಡಿ ಮಾಹಿತಿ

ಪ್ರತಿ ವರ್ಷ ಜುಲೈ 16 ರಂದು “ವಿಶ್ವ ಹಾವುಗಳ ದಿನ” ಆಚರಿಸಲಾಗುತ್ತದೆ. ಆದರೆ ನಮ್ಮಲ್ಲಿ ಹಾವು ಎಂದಾಕ್ಷಣ ಭಯ, ಹಾವು ಕೊಲ್ಲೋದು, ಮಂತ್ರ ಮಾಡೋದು ನಡೆಯುತ್ತದೆ. ವಿಜ್ಞಾನ ಏನು ಹೇಳುತ್ತದೆ? ಪ್ರಕೃತಿಯಲ್ಲಿ ಹಾವುಗಳ ಪಾತ್ರವೇನು? ನೋಡೋಣ.

ಪ್ರಕೃತಿಯಲ್ಲಿ ಹಾವುಗಳ ಪಾತ್ರ – “ಪರಿಸರದ ಪೊಲೀಸ್” ಆಗಿದ್ದು, ಹಾವುಗಳು ಆಹಾರ ಸರಪಳಿಯಲ್ಲಿ ಅತ್ಯಂತ ಮುಖ್ಯ ಕೊಂಡಿಯಾಗಿದೆ.

ಇಲಿ-ಬೆಳೆ ರಕ್ಷಣೆ:
ಒಂದು ಇಲಿ ವರ್ಷಕ್ಕೆ 25 ಕೆಜಿ ಧಾನ್ಯ ತಿನ್ನುತ್ತದೆ. ಒಂದು ಹಾವು ವರ್ಷಕ್ಕೆ 200-300 ಇಲಿಗಳನ್ನು ತಿನ್ನುತ್ತದೆ. ಅಂದರೆ ಒಂದು ಹಾವು ಸುಮಾರು ಐದು ಟನ್ ಧಾನ್ಯ ರಕ್ಷಣೆ.
ಕೃಷಿ ಇಲಾಖೆಯ ಪ್ರಕಾರ ರಾಸಾಯನಿಕ ಇಲ್ಲದೆ ಬೆಳೆ ರಕ್ಷಿಸುವ “ಜೈವಿಕ ಕೀಟನಾಶಕ” ಇದೇ.

ರೋಗ ನಿಯಂತ್ರಣ:
ಇಲಿಗಳಿಂದ ಪ್ಲೇಗ್, ಲೆಪ್ಟೋಸ್ಪೈರೋಸಿಸ್, ಸಾಲ್ಮೊನೆಲ್ಲಾ ರೋಗ ಬರುತ್ತದೆ. ಹಾವುಗಳು ಇಲಿ ಸಂಖ್ಯೆ ಕಡಿಮೆ ಮಾಡಿ ಮನುಷ್ಯನ ಆರೋಗ್ಯ ಕಾಪಾಡುತ್ತವೆ.

ಪರಿಸರ ಸಮತೋಲನ:
ಹಾವುಗಳು ಕಪ್ಪೆ, ಹಲ್ಲಿ, ಸಣ್ಣ ಹಕ್ಕಿಗಳ ಸಂಖ್ಯೆ ನಿಯಂತ್ರಿಸುತ್ತವೆ. ಹಾವುಗಳು ಇಲ್ಲದಿದ್ದರೆ ಇಲಿ-ಕಪ್ಪೆಗಳ ಸಂಖ್ಯೆ ಅತಿಯಾಗಿ ಬೆಳೆ, ಮೀನು ಕೊಳಗಳು ನಾಶವಾಗುತ್ತವೆ.
ವಿಜ್ಞಾನಿ ಡಾ. ರೋಮುಲಸ್ ವಿಟೇಕರ್ ಹೇಳುತ್ತಾರೆ: “ಒಂದು ಹೆಕ್ಟೇರ್ ಕಾಡಿನಲ್ಲಿ 50 ಹಾವುಗಳು ಇದ್ದರೆ, ಅದು ಆರೋಗ್ಯಕರ ಅರಣ್ಯದ ಸಂಕೇತ” ಜನರಲ್ಲಿರುವ ದೊಡ್ಡ ತಪ್ಪುತಿಳುವಳಿಕೆ ಹಾಗೂ ವೈಜ್ಞಾನಿಕ ಸತ್ಯ ಹೀಗಿದೆ.

ಎಲ್ಲಾ ಹಾವುಗಳು ವಿಷಕಾರಿ.ಭಾರತದಲ್ಲಿ 300 ಜಾತಿ ಹಾವುಗಳಿವೆ. ಅದರಲ್ಲಿ ಕೇವಲ 60 ಜಾತಿ ಮಾತ್ರ ವಿಷಕಾರಿ. ನಾಗರಹಾವು, ಕೊಳಕು ಮಂಡಲ, ಕಟ್ಟು, ರಸೆಲ್ ವೈಪರ್ ಮಾತ್ರ ಅಪಾಯಕಾರಿ. ಮಿಕ್ಕ 240 ಜಾತಿ ವಿಷವಿಲ್ಲದವು. ಹೆಬ್ಬಾವು, ನಾಗರ ಹಾವು ತರಹ ಕಾಣುವ “ಚೇಳು ಹಾವು” ವಿಷವಿಲ್ಲ.
ಹಾವು ಹಾಲು ಕುಡಿಯುತ್ತದೆ. ಸಂಪೂರ್ಣ ಸುಳ್ಳು. ಹಾವಿಗೆ ಹಾಲು ಜೀರ್ಣಿಸಿಕೊಳ್ಳುವ ಕಿಣ್ವವೇ ಇಲ್ಲ. ಹಾಲು ಕುಡಿಸಿದರೆ 3-4 ದಿನದಲ್ಲಿ ಸಾಯುತ್ತದೆ. ನಾಗರಪಂಚಮಿ ದಿನ ಹಾಲು ಹಾಕುವುದು ಕ್ರೌರ್ಯ.

ಹಾವು ಸೇಡು ತೀರಿಸಿಕೊಳ್ಳುತ್ತದೆ. ಹಾವಿಗೆ ಮೆಮೊರಿ ಕಡಿಮೆ. “ಜೋಡಿ ಹಾವು” ಕಾನ್ಸೆಪ್ಟ್ ಇಲ್ಲ. ಕಚ್ಚಿದ ಮೇಲೆ ಅದು ಓಡಿ ಹೋಗುತ್ತದೆ. ಮನುಷ್ಯನನ್ನು ಹುಡುಕಿ ಬರುವುದಿಲ್ಲ. ಮುಂಗುಸಿ ಮತ್ತು ಹಾವು ಕಾದಾಟ ನೋಡಿದರೆ ಐಶ್ವರ್ಯ,ಇದು ಕೇವಲ ಮೂಢನಂಬಿಕೆ. ಮುಂಗುಸಿ ಆಹಾರಕ್ಕಾಗಿ ಹಾವನ್ನು ಕೊಲ್ಲುತ್ತದೆ.
ಕಚ್ಚಿದ ಕೂಡಲೇ ಸುಣ್ಣ ಹಚ್ಚಿ, ಹಗ್ಗ ಕಟ್ಟಬೇಕು.WHO ಪ್ರಕಾರ ಇದು ತಪ್ಪು. ಗಾಯದ ಮೇಲೆ ಕಟ್ ಮಾಡುವುದು, ಬಾಯಿಂದ ಹೀರುವುದು, ಹಗ್ಗ ಕಟ್ಟುವುದು ವಿಷವನ್ನು ಇನ್ನೂ ವೇಗವಾಗಿ ಹರಡುತ್ತದೆ.

ಹಾವು ಕಚ್ಚಿದರೆ ಏನು ಮಾಡಬೇಕು?


ಶಾಂತವಾಗಿರಿ ಗಾಬರಿ ಆದರೆ ಹೃದಯ ವೇಗವಾಗಿ ಹೊಡೆದು ವಿಷ ವೇಗವಾಗಿ ಹರಡುತ್ತದೆ.
100 ಅಥವಾ 108 ಗೆ ಕರೆ ಮಾಡಿ,ಕೂಡಲೇ ಆಸ್ಪತ್ರೆಗೆ ಸಾಗಬೇಕು
ಗಾಯವನ್ನು ಸೋಪ್ ಅಥವಾ ಡೇಟಲ್ ನೀರಿನಲ್ಲಿ ತೊಳೆಯಿರಿ, ಕಟ್ ಮಾಡಬೇಡಿ, ಹೀರಬೇಡಿ.
ಕಚ್ಚಿದ ಹಾವಿನ ಫೋಟೋ ತೆಗೆಯಿರಿ ಯಾವ ಹಾವು ಅಂತ ಗೊತ್ತಾದರೆ ಚಿಕಿತ್ಸೆ ಸುಲಭ.
ಆಭರಣ ಅಥವಾ ತಾಯತ ತೆಗೆಯಿರಿ ಊದಿಕೊಳ್ಳಬಹುದು.

ನೆನಪಿಡಿ ಭಾರತದಲ್ಲಿ ಪ್ರತಿ ವರ್ಷ 58,000 ಜನ ಹಾವು ಕಡಿತದಿಂದ ಸಾಯುತ್ತಾರೆ. ಅದರಲ್ಲಿ 70% ಕಾರಣ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗದಿರುವುದು ಮತ್ತು ಮಂತ್ರ-ಮಾಂತ್ರಿಕರ ಬಳಿ ಹೋಗುವುದು.

ಮನೆಯಲ್ಲಿ ಹಾವು ಕಂಡರೆ ಏನು ಮಾಡಬೇಕು ಗೊತ್ತಾ?


ಮನೆಯಲ್ಲಿ ಹಾವು ಕಂಡರೆ ಕೊಲ್ಲಬಾರದು
14417 – Wildlife Helpline ಗೆ ಕರೆ ಮಾಡಿ. ಸ್ನೇಕ್ ರೆಸ್ಕ್ಯೂವರ್ ಬರುತ್ತಾರೆ.
ಇಲಿ ಬರದಂತೆ ನೋಡಿಕೊಳ್ಳಿ. ಹುಲ್ಲು, ಕಸ ಕಡಿಮೆ ಮಾಡಿ ಮನೆ ಸುತ್ತಲು ಸ್ವಚ್ಛತೆ ಕಾಪಾಡಿ.
ಮಕ್ಕಳಿಗೆ ಹಾವಿನ ಬಗ್ಗೆ ಸರಿಯಾದ ಮಾಹಿತಿ ಕೊಡಿ

ಹಾವುಗಳು ಶತ್ರು ಅಲ್ಲ. ಅವು ರೈತನ ಮಿತ್ರ, ಅರಣ್ಯದ ಕಾವಲುಗಾರ. ಕುಕ್ಕೆ ಸುಬ್ರಹ್ಮಣ್ಯನಲ್ಲಿ ನಾಗನನ್ನು ಪೂಜಿಸುವುದು ಇದೇ ಕಾರಣಕ್ಕೆ. ಈ ವಿಶ್ವ ಹಾವುಗಳ ದಿನ, ನಾವು ಭಯವನ್ನು ಬಿಟ್ಟು ವಿಜ್ಞಾನವನ್ನು ಅಪ್ಪೋಣ. ಪ್ರಕೃತಿಯನ್ನು ಉಳಿಸಿದರೆ, ಪ್ರಕೃತಿ ನಮ್ಮನ್ನು ಉಳಿಸುತ್ತದೆ.

Share it :

Leave a Reply

Your email address will not be published. Required fields are marked *