ರಾಯಚೂರಲ್ಲಿ 15 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗಲೇ ಶಿಕ್ಷಣ ಇಲಾಖೆಯ ಎಫ್ ಡಿ ಎ ಲೋಕಾಯುಕ್ತ ಬಲೆಗೆ

ರಾಯಚೂರು: ಲಂಚದ ಆಮಿಷಕ್ಕೆ ಬಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ (FDA) ಮಹಾಬಲೇಶ್, ಲೋಕಾಯುಕ್ತ ಪೊಲೀಸರು ಹೆಣೆದಿದ್ದ ಪ್ಲಾನ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ನಗರದ ನೂತನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿರುವ ಡಿಡಿಪಿಐ ಕಚೇರಿಯಲ್ಲಿಯೇ ಈ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆ ನಡೆದಿದೆ.

ರೂ. 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಅಸಾಮಿ: ಖಾಸಗಿ ಶಾಲೆಯೊಂದರ ನವೀಕರಣದ (Renewal) ಕಡತ ವಿಲೇವಾರಿ ಮಾಡಿಕೊಡಲು ಎಫ್‌ಡಿಎ ಮಹಾಬಲೇಶ್ ಅವರು ದೂರುದಾರರಾದ ಸಿದ್ದಣ್ಣ ಎಂಬುವವರಿಂದ 25,000 ರೂಪಾಯಿ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು. ಭ್ರಷ್ಟ ಅಧಿಕಾರಿಗೆ ಪಾಠ ಕಲಿಸಲು ನಿರ್ಧರಿಸಿದ ಸಿದ್ದಣ್ಣ, ಈ ಬಗ್ಗೆ ತಕ್ಷಣವೇ ಲೋಕಾಯುಕ್ತರ ಕದ ತಟ್ಟಿದ್ದರು.

ಕಚೇರಿಯಲ್ಲೇ ಲೋಕಾಯುಕ್ತ ಟ್ರ್ಯಾಪ್: ಯೋಜನೆಯಂತೆ, ಸಿದ್ದಣ್ಣ ಅವರಿಂದ ಮೊದಲ ಕಂತಾಗಿ 15,000 ರೂಪಾಯಿ ಹಣವನ್ನು ಮಹಾಬಲೇಶ್ ಪಡೆದುಕೊಳ್ಳುತ್ತಿದ್ದಾಗ ಹೊಂಚು ಹಾಕಿದ್ದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣದ ಸಮೇತ ಆತನನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಭ್ರಷ್ಟ ಅಧಿಕಾರಿಯನ್ನು ಬಂಧಿಸಿರುವ ಲೋಕಾಯುಕ್ತ ತಂಡ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದೆ.

Share it :

Leave a Reply

Your email address will not be published. Required fields are marked *