Gen-Z ಪ್ರತಿಭಟನೆಗೆ ರಣರಂಗವಾದ ಯುರೋಪ್ : ಅಂಗಡಿಗಳ ಲೂಟಿ, ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಬರ್ಲಿನ್ (ಜರ್ಮನಿ): ಸ್ಪೇನ್, ಇಟಲಿ ಮತ್ತು ಫ್ರಾನ್ಸ್‌ನಲ್ಲಿ ಭುಗಿಲೆದ್ದಿದ್ದ Gen-Z ಪ್ರತಿಭಟನೆಯ ಕಿಡಿ ಇದೀಗ ಜರ್ಮನಿಗೂ ವ್ಯಾಪಿಸಿದ್ದು, ಅಲ್ಲಿನ ಪ್ರಮುಖ ನಗರಗಳಲ್ಲಿ ತೀವ್ರ ಹಿಂಸಾಚಾರ, ಅಂಗಡಿಗಳ ಲೂಟಿ ಮತ್ತು ಪೊಲೀಸರ ಮೇಲಿನ ದಾಳಿಗೆ ಕಾರಣವಾಗಿದೆ. ಹೆಚ್ಚುತ್ತಿರುವ ಜೀವನ ವೆಚ್ಚ, ಶಿಕ್ಷಣ ಕ್ಷೇತ್ರಕ್ಕೆ ಅನುದಾನದ ಕೊರತೆ, ಸಾರ್ವಜನಿಕ ವೆಚ್ಚ ಕಡಿತ ಹಾಗೂ ಕಡ್ಡಾಯ ಸೇನಾ ಸೇವೆಯ ಪ್ರಸ್ತಾಪವನ್ನು ವಿರೋಧಿಸಿ ಯುವ ಸಮುದಾಯವು ಜರ್ಮನಿಯಾದ್ಯಂತ ಬೃಹತ್ ರ್ಯಾಲಿಗಳನ್ನು ಆಯೋಜಿಸಿತ್ತು. ಹಗಲಿನಲ್ಲಿ ಶಾಂತಿಯುತವಾಗಿದ್ದ ಈ ಪ್ರತಿಭಟನೆಗಳು ರಾತ್ರಿಯಾಗುತ್ತಿದ್ದಂತೆ ಹಿಂಸಾತ್ಮಕ ರೂಪ ಪಡೆದುಕೊಂಡಿವೆ.

ಹಿಂಸಾಚಾರವನ್ನು ಹತ್ತಿಕ್ಕಲು ಜರ್ಮನ್ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಪೆಪ್ಪರ್ ಸ್ಪ್ರೇ ಹಾಗೂ ವಾಟರ್ ಕ್ಯಾನನ್‌ಗಳನ್ನು (ನೀರಿನ ಫಿರಂಗಿ) ವ್ಯಾಪಕವಾಗಿ ಬಳಸಿದ್ದಾರೆ. ಜೊತೆಗೆ, ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಹ್ಯಾಂಬರ್ಗ್‌ನಲ್ಲಿ 120 ಕ್ಕೂ ಹೆಚ್ಚು ಹಾಗೂ ಫ್ರಾಂಕ್‌ಫರ್ಟ್‌ನಲ್ಲಿ 13 ರಿಂದ 29 ವರ್ಷದೊಳಗಿನ 54 ಕ್ಕೂ ಹೆಚ್ಚು ಯುವಕರನ್ನು ಬಂಧಿಸಲಾಗಿದೆ.

ಬೃಹತ್ ಆಂದೋಲನವನ್ನು “Gen Z regelt” (ಜೆನ್-ಝೆಡ್ ಅಧಿಕಾರ ವಹಿಸಿಕೊಳ್ಳುತ್ತದೆ) ಎಂಬ ಯುವ ಒಕ್ಕೂಟದ ನೇತೃತ್ವದಲ್ಲಿ ನಡೆಸಲಾಯಿತು. ಬರ್ಲಿನ್, ಫ್ರಾಂಕ್‌ಫರ್ಟ್, ಕೊಲೋನ್, ಹ್ಯಾಂಬರ್ಗ್ ಮತ್ತು ಮ್ಯೂನಿಚ್ ಸೇರಿದಂತೆ 30ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಹತ್ತಾರು ಸಾವಿರ ಯುವಕರು ಬೀದಿಗಿಳಿದಿದ್ದರು.

ಈ ವೇಳೆ, ಜರ್ಮನಿಯ ಆರ್ಥಿಕ ಕೇಂದ್ರವಾದ ಫ್ರಾಂಕ್‌ಫರ್ಟ್‌ನ ಮುಖ್ಯ ಶಾಪಿಂಗ್ ಬೀದಿಗಳಲ್ಲಿ ಮುಸುಕುಧಾರಿ ಗಲಭೆಕೋರರು ಬಟ್ಟೆ ಮತ್ತು ಶೂ ಅಂಗಡಿಗಳ ಕಿಟಕಿಗಳನ್ನು ಒಡೆದು ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಗನ್ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ಆಯುಧಗಳನ್ನು ಕದಿಯಲು ಯತ್ನಿಸಿದ್ದು, ಪೊಲೀಸರ ಮೇಲೆ ಮೊಲೊಟೊವ್ ಕಾಕ್‌ಟೇಲ್ (ಪೆಟ್ರೋಲ್ ಬಾಂಬ್), ಬಾಟಲಿಗಳು ಮತ್ತು ಪಟಾಕಿಗಳನ್ನು ಎಸೆದಿದ್ದಾರೆ.

ಏತನ್ಮಧ್ಯೆ, Gen Z regelt ಎಂಬ ಸಂಘಟನೆ ಈ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಿತ್ತು. ಆದರೆ, ರಾತ್ರಿಯ ವೇಳೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ತೀವ್ರ ಎಡಪಂಥೀಯ ಉಗ್ರಗಾಮಿಗಳು ಈ ಪ್ರತಿಭಟನೆಯೊಳಗೆ ನುಸುಳಿ ಹಿಂಸಾಚಾರ ಉಂಟುಮಾಡಿದ್ದಾರೆ ಎಂದು ಜರ್ಮನಿಯ ಆಂತರಿಕ ಸಚಿವಾಲಯ ತಿಳಿಸಿರುವ ಮಾಹಿತಿ ಬೆಳಕಿಗೆ ಬಂದಿದೆ.

Share it :

Leave a Reply

Your email address will not be published. Required fields are marked *