ರೈತರು ದೇಶದ ಆಸ್ತಿ, ಯಾವುದೇ ಕಾರಣಕ್ಕೂ ರೈತರನ್ನು ಕೈ ಬಿಡಬಾರದು : ಸಿಎಂ ಡಿಕೆ ಶಿವಕುಮಾರ್‌

ಬೆಳಗಾವಿ: ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಸಮನ್ವಯತೆ ತರುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಅಂತಿಮ ದರ ನಿಗದಿಯು ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಸಂಧಾನ ಪ್ರಕ್ರಿಯೆಯ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿಗೆ ನಿರ್ಗಮಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಸುಮಾರು 80 ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ನೈಜ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕಳೆದ 10 ವರ್ಷಗಳಿಂದ ಸಕ್ಕರೆ ಮಾರಾಟ ದರ ಹೆಚ್ಚಳವಾಗಿಲ್ಲ ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳು ಕಾರ್ಖಾನೆಗಳಿಗೆ ಸುಲಭವಾಗಿ ಸಾಲ ನೀಡುತ್ತಿಲ್ಲ. ಹೀಗಾಗಿ ಹೆಚ್ಚಿನ ಬಡ್ಡಿದರದಲ್ಲಿ ಸಹಕಾರ ವಲಯದಿಂದ ಸಾಲ ತಂದು ಕಾರ್ಖಾನೆ ನಡೆಸುವ ಪರಿಸ್ಥಿತಿ ಇದೆ ಎಂದು ಮಾಲೀಕರು ತಿಳಿಸಿದ್ದಾರೆ. ಮಂಡ್ಯದಲ್ಲಿ ರೈತರೇ ಕಾರ್ಖಾನೆ ನಡೆಸಿದ ಇತಿಹಾಸವಿದೆ. ರೈತರಿಲ್ಲದೆ ಕಾರ್ಖಾನೆ ಇಲ್ಲ, ಕಾರ್ಖಾನೆಗಳಿಲ್ಲದೆ ರೈತರಿಲ್ಲ. ಇಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಪೂರಕವಾಗಿರಬೇಕು ಎಂದರು

ರೈತರು(Farmers) ದೇಶದ ಆಸ್ತಿ, ಯಾವುದೇ ಕಾರಣಕ್ಕೂ ರೈತರನ್ನು ಕೈಬಿಡಬಾರದು, ಅವರನ್ನು ಬದುಕಿಸಬೇಕು. ಅವರು ಸೂಕ್ತ ದರ ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ವಿಳಂಬವಾದರೆ ಗದ್ದೆಗಳಲ್ಲಿ ಕಬ್ಬು ಒಣಗಿ ಹೋಗುವ ಆತಂಕವಿದೆ. ಹೀಗಾಗಿ ತಕ್ಷಣ ಕ್ರಷಿಂಗ್ ಆರಂಭವಾಗಬೇಕು ಎಂದು ಹೇಳಿದರು.

ಇನ್ನು ಮೈಸೂರಿನ ಬಗ್ಗೆ ಮಾತನಾಡಿ, ರಾಜಮನೆತನಕ್ಕೆ ನೀಡಬೇಕಾದ ಗೌರವ ಹಾಗೂ ಸಾಂಪ್ರದಾಯಿಕ ಪದ್ಧತಿಗಳಿಗೆ ಯಾವುದೇ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಮೈಸೂರು ದಸರಾ ಮಹೋತ್ಸವ ಆಚರಣೆ ವಿಚಾರವಾಗಿ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು.

ಪ್ರಮೋದಾದೇವಿ ಅವರು ನೀಡಿರುವ ಹೇಳಿಕೆಯನ್ನು ನಾನು ಇನ್ನೂ ಪೂರ್ಣವಾಗಿ ನೋಡಿಲ್ಲ. ಅವರು ಏನು ಹೇಳಿದ್ದಾರೆ ಎಂಬುದನ್ನು ಗಮನಿಸಿ, ಅವರೊಂದಿಗೆ ಚರ್ಚೆ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರವೂ ಅಲ್ಲ, ಪ್ರಮೋದಾದೇವಿ ಅವರ ವೈಯಕ್ತಿಕ ವಿಚಾರವೂ ಅಲ್ಲ; ಇದು ಇಡೀ ರಾಜ್ಯದ ಹೆಮ್ಮೆಯ ಹಬ್ಬದ ವಿಚಾರ ಎಂದರು.

ದಸರಾ ಮಹೋತ್ಸವ ಸರ್ಕಾರದ ಕಾರ್ಯಕ್ರಮವೇ ಹೊರತು ಡಿಕೆಶಿ ಕಾರ್ಯಕ್ರಮವಲ್ಲ. ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ತಿದ್ದಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

Share it :

Leave a Reply

Your email address will not be published. Required fields are marked *