ಮಾಜಿ ಸಚಿವ ಜಮೀರ್‌ ಅಹಮದ್ ಗೆ ಲೋಕಾಯುಕ್ತ ಸಂಕಷ್ಟ!

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಜಮೀರ್ ಅಹ್ಮದ್ ವಿರುದ್ಧ ಕಾನೂನು ಕ್ರಮ ಜರುಗಿಸಲು (ಪ್ರಾಸಿಕ್ಯೂಷನ್) ಅನುಮತಿ ನೀಡುವಂತೆ ಲೋಕಾಯುಕ್ತ ಸಂಸ್ಥೆಯು ರಾಜ್ಯಪಾಲರಿಗೆ ಅಧಿಕೃತವಾಗಿ ಮನವಿ ಮಾಡಿದೆ.

25 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆ ಆರೋಪ

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಆದಾಯದ ಮೂಲಗಳಿಗಿಂತ 25 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಹುಕೋಟಿ ಐಎಂಎ (IMA) ವಂಚನೆ ಪ್ರಕರಣದ ತನಿಖೆಯ ವೇಳೆ ಜಮೀರ್ ಅವರ ಈ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಬೆಳಕಿಗೆ ಬಂದಿತ್ತು.

ಇಡಿ ದಾಳಿಯಿಂದ ಲೋಕಾಯುಕ್ತ ತನಿಖೆಯವರೆಗೆ..

  • 2018: ಐಎಂಎ ಕಂಪನಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು.
  • ಎಸಿಬಿ ತನಿಖೆ: ಜಮೀರ್ ಅವರ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ಇಡಿ ಅಧಿಕಾರಿಗಳು ಸೂಚನೆ ನೀಡಿದ್ದರು.
  • ಲೋಕಾಯುಕ್ತಕ್ಕೆ ವರ್ಗಾವಣೆ: ರಾಜ್ಯದಲ್ಲಿ ಎಸಿಬಿ ರದ್ದಾದ ಬಳಿಕ, ಈ ಪ್ರಕರಣದ ಸಂಪೂರ್ಣ ತನಿಖೆಯ ಜವಾಬ್ದಾರಿಯನ್ನು ಲೋಕಾಯುಕ್ತ ಸಂಸ್ಥೆ ವಹಿಸಿಕೊಂಡು ತನಿಖೆ ಮುಂದುವರಿಸಿತ್ತು.

ಸಾವಿರಾರು ಪುಟಗಳ ದಾಖಲೆ ಸಲ್ಲಿಕೆ: ಚಾರ್ಜ್‌ಶೀಟ್‌ಗೆ ಸಿದ್ಧತೆ

ಲೋಕಾಯುಕ್ತ ಅಧಿಕಾರಿಗಳು ಸುದೀರ್ಘ ತನಿಖೆ ನಡೆಸಿದ್ದು, ಜಮೀರ್ ಅಹ್ಮದ್ ವಿರುದ್ಧ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಬಲವಾದ ಪುರಾವೆಗಳನ್ನು ಕಲೆಹಾಕಿದ್ದಾರೆ. ಸದ್ಯ ಸಾವಿರಾರು ಪುಟಗಳ ತನಿಖಾ ವರದಿ ಮತ್ತು ಸಾಕ್ಷ್ಯಾಧಾರಗಳ ದಾಖಲೆಗಳನ್ನು ಲೋಕಾಯುಕ್ತವು ರಾಜ್ಯಪಾಲರಿಗೆ ಸಲ್ಲಿಸಿದೆ.

ಮುಂದೇನು?: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಜಮೀರ್ ಅಹ್ಮದ್ ಖಾನ್ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (Charge Sheet) ಸಲ್ಲಿಸಲು ಲೋಕಾಯುಕ್ತ ಸಜ್ಜಾಗಿದೆ. ಆದರೆ, ಕಾನೂನು ಪ್ರಕಾರ ಜನಪ್ರತಿನಿಧಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ರಾಜ್ಯಪಾಲರ ಪೂರ್ವಾನುಮತಿ ಕಡ್ಡಾಯವಾಗಿದೆ. ಹೀಗಾಗಿ ಲೋಕಾಯುಕ್ತವು ರಾಜ್ಯಪಾಲರ ನಿರ್ಧಾರಕ್ಕಾಗಿ ಕಾಯುತ್ತಿದ್ದು, ಅನುಮತಿ ಸಿಕ್ಕ ತಕ್ಷಣವೇ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗಲಿದೆ.

Share it :

Leave a Reply

Your email address will not be published. Required fields are marked *