ಸಾಗರ/ಬೆಂಗಳೂರು: ಸಾಗರ ಉಪವಿಭಾಗೀಯ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ನಾಗೇಂದ್ರಪ್ಪ ಎಂ.ಬಿ. ಅವರ ನಿರಂತರ ಕರ್ತವ್ಯಲೋಪ ಹಾಗೂ ರೋಗಿಗಳ ನಿರ್ಲಕ್ಷ್ಯದ ವಿರುದ್ಧ ಸಾಗರ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಬರೆದಿದ್ದ ಪತ್ರಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಶಾಸಕರ ದೂರಿನ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ, ಡಾ. ನಾಗೇಂದ್ರಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಾಗರ ಆಸ್ಪತ್ರೆಯ ಹಾಲಿ ಹುದ್ದೆಯಿಂದ ಬಿಡುಗಡೆಗೊಳಿಸಿ ಬೆಂಗಳೂರಿನ ಆಯುಕ್ತಾಲಯಕ್ಕೆ ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ವೈದ್ಯರ ಎಡವಟ್ಟುಗಳ ವಿರುದ್ಧ ಶಾಸಕರ ಪತ್ರ ಚಳವಳಿ
ಕಳೆದ ಸುಮಾರು ಐದು ವರ್ಷಗಳಿಂದ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ನಾಗೇಂದ್ರಪ್ಪ ಅವರ ವಿರುದ್ಧ ರೋಗಿಗಳಿಗೆ ಸರಿಯಾಗಿ ಸ್ಪಂದಿಸದಿರುವುದು, ಶಸ್ತ್ರಚಿಕಿತ್ಸೆ ವೇಳೆ ಎಸಗಿದ ಗಂಭೀರ ಲೋಪಗಳು ಹಾಗೂ ಸಾರ್ವಜನಿಕರನ್ನು ಸತಾಯಿಸುತ್ತಿದ್ದ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗಿದ್ದವು. ಈ ಸಂಬಂಧ ಸಾರ್ವಜನಿಕರಿಂದ ಪೊಲೀಸ್ ಠಾಣೆಗಳಲ್ಲೂ ದೂರುಗಳು ದಾಖಲಾಗಿದ್ದವು. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ದಿನಾಂಕ 23.06.2026 ರಂದೇ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ವೈದ್ಯರನ್ನು ತಕ್ಷಣವೇ ಸಾಗರದಿಂದ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕೆಂದು ಬಲವಾಗಿ ಒತ್ತಾಯಿಸಿದ್ದರು.
ವಿಚಾರಣಾ ವರದಿ ಹಾಗೂ ಸಾಮಾಜಿಕ ಜಾಲತಾಣಗಳ ಆಕ್ರೋಶ
ಶಾಸಕರ ಪತ್ರದ ಜತೆಗೆ, ಸಂತ್ರಸ್ತ ಮಹಿಳೆಯರೊಬ್ಬರು ನೀಡಿದ್ದ ದೂರಿನನ್ವಯ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (ಡಿಎಚ್‌ಒ) ನಡೆಸಿದ ತನಿಖಾ ವರದಿಯಲ್ಲೂ ವೈದ್ಯರ ನಿರ್ಲಕ್ಷ್ಯ ದೃಢಪಟ್ಟಿತ್ತು. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನುರಿತ ಸರ್ಜನ್ ನೆರವು ಪಡೆಯದೇ ಇರುವುದು ಹಾಗೂ ಸಮಸ್ಯೆ ಉಲ್ಬಣಿಸಿದಾಗ ತಕ್ಷಣ ಉನ್ನತ ಆಸ್ಪತ್ರೆಗೆ ಶಿಫಾರಸು ಮಾಡದೇ ಲೋಪವೆಸಗಿರುವುದು ಡಿಎಚ್‌ಒ ವರದಿಯಲ್ಲಿ ಬಯಲಾಗಿತ್ತು. ಇದರ ನಡುವೆ, “ಇದು ಸಾಗರದ ವೈದ್ಯ ಡಾ|| ನಾಗೇಂದ್ರಪ್ಪ ಎಡವಟ್ಟಿನ ಕಥೆ” ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿತ್ತು.
ಬೆಂಗಳೂರು ಆಯುಕ್ತಾಲಯಕ್ಕೆ ಹಾಜರಾಗಲು ಸೂಚನೆ
ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹಿಂದಿನ ಮನವಿ ಪತ್ರ, ಡಿಎಚ್‌ಒ ನೀಡಿದ ತನಿಖಾ ವರದಿ ಹಾಗೂ ಸಾರ್ವಜನಿಕರ ತೀವ್ರ ಪ್ರತಿರೋಧವನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಇದೀಗ ಮಹತ್ವದ ಕ್ರಮ ಕೈಗೊಂಡಿದೆ. ಡಾ. ನಾಗೇಂದ್ರಪ್ಪ ಅವರನ್ನು ಸಾಗರದಿಂದ ಬಿಡುಗಡೆಗೊಳಿಸಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದ ಆಯುಕ್ತಾಲಯದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ಸದರಿ ವೈದ್ಯರನ್ನು ಕೂಡಲೇ ಕರ್ತವ್ಯದಿಂದ ಮುಕ್ತಗೊಳಿಸಿ ಆಯುಕ್ತಾಲಯಕ್ಕೆ ಮಾಹಿತಿ ಸಲ್ಲಿಸುವಂತೆ ಶಿವಮೊಗ್ಗ ಡಿಎಚ್‌ಒ ಅವರಿಗೆ ನಿರ್ದೇಶನ ನೀಡಲಾಗಿದೆ.






