ಬೀಗ ಹಾಕಿದ ಮನೆಗಳಿಗೂ ಗೃಹ ಜ್ಯೋತಿ ಭಾಗ್ಯ: ಅ. 31ರೊಳಗೆ ಬೆಸ್ಕಾಂಗೆ ಭೇಟಿ ನೀಡಿ

ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯಡಿ(gruha jyothi scheme) ಬೆಸ್ಕಾಂ(BESCOM) ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಮನೆ-ಮನೆ ಸಮೀಕ್ಷೆ(Door-to-door survey) ಸಂದರ್ಭದಲ್ಲಿ ಸಿಗದ ಗ್ರಾಹಕರಿಗೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಅವಕಾಶ ಒದಗಿಸಿದೆ. ಸಮೀಕ್ಷಾ ಸಿಬ್ಬಂದಿ ಬಂದಾಗ ಮನೆಗೆ ಬೀಗ ಹಾಕಿದ್ದ ಕಾರಣಕ್ಕೆ ಅಥವಾ ಮನೆ ಖಾಲಿಯಿದ್ದ ಪರಿಣಾಮ ಪರಿಶೀಲನೆಗೆ ಒಳಪಡದ ಗ್ರಾಹಕರು, ಅಕ್ಟೋಬರ್ 31ರೊಳಗೆ ಸಮೀಪದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ನೇರವಾಗಿ ಭೇಟಿ ನೀಡಿ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ.

ಬಹುತೇಕ ಮನೆಗಳ ಪರಿಶೀಲನೆ ಅಂತ್ಯ

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಫಲಾನುಭವಿಗಳು ಸೇರಿದಂತೆ ಒಟ್ಟು 74,29,773 ನೋಂದಾಯಿತ ಗೃಹ ಜ್ಯೋತಿ ಗ್ರಾಹಕರಿದ್ದಾರೆ. ಈ ಪೈಕಿ ಅಕ್ಟೋಬರ್‌ 14ರ ವೇಳೆಗೆ 72,40,489 ಗ್ರಾಹಕರ ಮನೆಗಳನ್ನು ತಲುಪಲಾಗಿದ್ದು, ಶೇಕಡಾ 97.45ರಷ್ಟು ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

16 ಲಕ್ಷಕ್ಕೂ ಅಧಿಕ ಮನೆಗಳು ಲಾಕ್!

ಆದರೆ, ಸಮೀಕ್ಷಾ ಅವಧಿಯಲ್ಲಿ ಬರೋಬ್ಬರಿ 16.37 ಲಕ್ಷ ಗ್ರಾಹಕರು ಸಿಬ್ಬಂದಿಗೆ ಲಭ್ಯವಾಗಿಲ್ಲ. ಇದರಲ್ಲಿ 16.09 ಲಕ್ಷ ಮನೆಗಳಿಗೆ ಬೀಗ ಹಾಕಿದ್ದರೆ, 28,519 ಮನೆಗಳು ಸಂಪೂರ್ಣ ಖಾಲಿಯಾಗಿದ್ದವು. ಇದರಿಂದಾಗಿ ಇಷ್ಟೊಂದು ದೊಡ್ಡ ಸಂಖ್ಯೆಯ ಅರ್ಹ ಗ್ರಾಹಕರು ಯೋಜನೆಯ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರ ಹಿತದೃಷ್ಟಿಯಿಂದ ಗಡುವನ್ನು ವಿಸ್ತರಿಸುವಂತೆ ಬೆಸ್ಕಾಂ ಸರ್ಕಾರಕ್ಕೆ ವಿನಂತಿ ಸಲ್ಲಿಸಿತ್ತು.

ಅ. 31 ಕೊನೆಯ ಗಡುವು

ಬೆಸ್ಕಾಂ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಸರ್ಕಾರ ಸಮೀಕ್ಷೆ ಪ್ರಕ್ರಿಯೆಯನ್ನು ಅಕ್ಟೋಬರ್‌ 31ರವರೆಗೆ ವಿಸ್ತರಿಸಿ ಆದೇಶಿಸಿದೆ. ಈವರೆಗೆ ದಾಖಲೆ ಪರಿಶೀಲನೆಗೆ ಸಿಗದ ಗ್ರಾಹಕರು ತಕ್ಷಣವೇ ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ಮಾಹಿತಿ ಅಪ್‌ಡೇಟ್ ಮಾಡಿಕೊಳ್ಳಬೇಕು.

ಅರ್ಹ ಫಲಾನುಭವಿಗಳ ದಾಖಲೆಗಳ ಪರಿಶೀಲನೆಗೆ ಇದುವೇ ಅಂತಿಮ ಹಾಗೂ ‘ಒಂದು ಬಾರಿ’ಯ ಅವಕಾಶವಾಗಿದ್ದು, ಅವಧಿ ಮುಗಿದ ಬಳಿಕ ಯಾವುದೇ ವಿನಂತಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

Share it :

Leave a Reply

Your email address will not be published. Required fields are marked *