ಬೆಂಗಳೂರು: ರಾಜ್ಯದಲ್ಲಿ 2026ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ (Valmiki Jayanti) ಆಚರಣೆಯ ದಿನಾಂಕವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ (State Government) ಹೊಸ ಅಧಿಸೂಚನೆ ಹೊರಡಿಸಿದೆ. ಈ ಮುನ್ನ ಪ್ರಕಟಿಸಲಾಗಿದ್ದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿನ ದಿನಾಂಕವನ್ನು ಬದಲಾಯಿಸಲಾಗಿದ್ದು, ಅಕ್ಟೋಬರ್ 26ರ ಸೋಮವಾರದಂದು ಅಧಿಕೃತವಾಗಿ ವಾಲ್ಮೀಕಿ ಜಯಂತಿ ಆಚರಿಸಲು ಹಾಗೂ ಅಂದು ಸಾರ್ವತ್ರಿಕ ರಜೆ (Public holiday) ನೀಡಲು ತೀರ್ಮಾನಿಸಲಾಗಿದೆ.
ಶೀಗಿ ಹುಣ್ಣಿಮೆ ಹಿನ್ನೆಲೆ: ಭಾನುವಾರದಿಂದ ಸೋಮವಾರಕ್ಕೆ ರಜೆ ಶಿಫ್ಟ್
ಸರ್ಕಾರವು 2025ರ ನವೆಂಬರ್ 17ರಂದು ಬಿಡುಗಡೆ ಮಾಡಿದ್ದ ವಾರ್ಷಿಕ ರಜಾ ಕ್ಯಾಲೆಂಡರ್ನಲ್ಲಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 25ರ ಭಾನುವಾರ ನಿಗದಿಪಡಿಸಲಾಗಿತ್ತು. ಆದರೆ ಧಾರ್ಮಿಕ ಮಹತ್ವವುಳ್ಳ ಶೀಗಿ ಹುಣ್ಣಿಮೆಯು ಅಕ್ಟೋಬರ್ 26ರ ಸೋಮವಾರ ಬಂದಿರುವುದರಿಂದ, ಅಂದೇ ಜಯಂತಿಯನ್ನು ಆಚರಿಸಿ ಸಾರ್ವತ್ರಿಕ ರಜೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.
ಬ್ಯಾಂಕುಗಳು, ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಅನ್ವಯ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಡಿಪಿಎಆರ್) ರಾಜ್ಯಪಾಲರ ಆದೇಶದಂತೆ ಈ ಪರಿಷ್ಕೃತ ಆದೇಶ ಪ್ರಕಟಿಸಿದೆ. 1881ರ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯ (ಎನ್.ಐ. ಆ್ಯಕ್ಟ್) ಸೆಕ್ಷನ್ 25ರ ಅನ್ವಯವೂ ಈ ರಜೆ ಅನ್ವಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಇದರ ಪರಿಣಾಮವಾಗಿ ಅಕ್ಟೋಬರ್ 26ರಂದು ರಾಜ್ಯದ ಶಾಲಾ-ಕಾಲೇಜುಗಳು, ಬ್ಯಾಂಕುಗಳು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ




