ಅಧ್ಯಕ್ಷರ ಆಯ್ಕೆ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯುವ ವಿಶ್ವಾಸವಿದೆ : ಕುಮಾರ್ ಬಂಗಾರಪ್ಪ

ಮೈಸೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವಧಿ ನವೆಂಬರ್‌ 10ಕ್ಕೆ ಮುಗಿಯಲಿದೆ. ಹೊಸ ಅಧ್ಯಕ್ಷರ ನೇಮಕ ಬಹುತೇಕ ಖಚಿತ ಎಂದು ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಹೆಸರು ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿ, ಯಾರು ಅಧ್ಯಕ್ಷರಾಗಲಿದ್ದಾರೆ ಎಂದು ಈಗಲೇ ಹೇಳಲಾಗದು. ಹೈಕಮಾಂಡ್ ಹಿರಿಯರು ಮತ್ತು ಕಿರಿಯರನ್ನು ಗಮನದಲ್ಲಿಟ್ಟುಕೊಂಡು ಸಂಘಟನಾ ಶಕ್ತಿಯುಳ್ಳ ನಾಯಕರನ್ನು ಆಯ್ಕೆ ಮಾಡಲಿದೆ ಎಂದರು.

ಅಧ್ಯಕ್ಷರ ಆಯ್ಕೆ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯುವ ವಿಶ್ವಾಸವಿದೆ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದು, ಬಿಡುವುದು ವರಿಷ್ಠರ ತೀರ್ಮಾನಕ್ಕೆ ಬಿಟ್ಟದ್ದು. ಒಂದು ವೇಳೆ ಅವರನ್ನೇ ಮುಂದುವರಿಸಿದರೂ ಪಕ್ಷದ ಕಾರ್ಯಕರ್ತರಾಗಿ ನಾವು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯೇಂದ್ರ ಭೇಟಿ ಕುರಿತು ಮಾತನಾಡಿ, ರಾಜಕೀಯವಾಗಿ ಎಲ್ಲರೂ ಒಗ್ಗೂಡುವುದು ಸೂಕ್ತ. ಯತ್ನಾಳ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಕುರಿತು ವರಿಷ್ಠರು ನಿರ್ಧರಿಸಲಿದ್ದಾರೆ. ವಿಜಯೇಂದ್ರ ಅವರ ಸಂಘಟನೆ ಕುರಿತು ಈಗಾಗಲೇ ಹೈಕಮಾಂಡ್‌ಗೆ ವರದಿ ನೀಡಿದ್ದು, ಅದನ್ನು ಮತ್ತೆ ಬಹಿರಂಗಪಡಿಸುವುದಿಲ್ಲ ಎಂದರು.

Share it :

Leave a Reply

Your email address will not be published. Required fields are marked *