ವಾಷಿಂಗ್ಟನ್: ಭಾರತ ಮತ್ತು ಇರಾನ್ ನಡುವೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂದು ತಮಗೆ ಅನಿಸುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗಿದ್ದ ಕುರಿತು ‘ಫಾಕ್ಸ್ ನ್ಯೂಸ್ ರೇಡಿಯೊ’ದ ‘ದಿ ಬ್ರಯಾನ್ ಕಿಲ್ಮೀಡ್ ಶೋ’ನಲ್ಲಿ ಕೇಳಿದ ಪ್ರಶ್ನೆಗೆ ರೂಬಿಯೊ ಪ್ರತಿಕ್ರಿಯಿಸಿದ್ದಾರೆ.
ಜಗತ್ತಿನ ಹಲವು ದೇಶಗಳು ಇರಾನ್ ಆಡಳಿತದೊಂದಿಗೆ ಮಾತುಕತೆ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯಾವುದೇ ದೇಶವೂ ಇರಾನ್‌ಗೆ ಅಮೆರಿಕದ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ನೆರವಾಗಬಾರದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ರೂಬಿಯೊ ಹೇಳಿದರು.
ಯಾವುದೇ ದೇಶಗಳು ಹೀಗೆ ಮಾಡಲು ನಿರ್ಧರಿಸಿದರೆ, ನಾವು ಆ ದೇಶಗಳ ಮೇಲೂ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ರೂಬಿಯೊ ಎಚ್ಚರಿಸಿದರು.ಯಾವುದೇ ದೇಶವೂ ಇರಾನ್‌ಗೆ ಆದಾಯ ಗಳಿಸಲು ಮಾರ್ಗಗಳನ್ನು ಸೃಷ್ಟಿಸಲು ನೆರವಾಗಬಾರದು. ಆ ಆದಾಯವನ್ನು ಅವರು ಭಯೋತ್ಪಾದನೆಗೆ ಬೆಂಬಲ ನೀಡಲು ಹಾಗೂ ಪರಮಾಣು ಅಸ್ತ್ರ ನಿರ್ಮಿಸಲು ಬಳಸಬಹುದು ಎಂದರು.
ಇದೇ ವೇಳೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗಿನ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ಇರಾನ್‌ನೊಂದಿಗೆ ಭಾರತದ ವ್ಯಾಪಾರ ವಹಿವಾಟಿನ ವಲಯವನ್ನು ವಿಸ್ತರಿಸಿ, ವೈವಿಧ್ಯಮಯಗೊಳಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
ಬಿಷ್ಕೆಕ್‌ನಲ್ಲಿ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾದೆ. ವಿವಿಧ ಕ್ಷೇತ್ರಗಳಲ್ಲಿ ಇರಾನ್‌ನೊಂದಿಗಿನ ಭಾರತದ ದೀರ್ಘಕಾಲದ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದು ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಹಜವಾಗಿಯೇ ಪ್ರತಿಯೊಂದು ದೇಶವೂ ತನ್ನದೇ ಆದ ವಿದೇಶಾಂಗ ನೀತಿಯನ್ನು ರೂಪಿಸಿಕೊಳ್ಳುತ್ತದೆ. ಜಗತ್ತಿನ ಹಲವು ದೇಶಗಳು ಇರಾನ್ ಆಡಳಿತದೊಂದಿಗೆ ಮಾತುಕತೆ ನಡೆಸುತ್ತವೆ ಪ್ರಧಾನಿ ಮೋದಿ ಮತ್ತು ಪೆಜೆಶ್ಕಿಯಾನ್ ಅವರು ವ್ಯಾಪಾರ ಒಪ್ಪಂದಕ್ಕೆ ಮುಂದಾಗಿರುವಂತೆ ಕಾಣುತ್ತಿದೆ ಎಂಬ ನಿರೂಪಕ ಬ್ರಯಾನ್ ಕಿಲ್ಮೀಡ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೂಬಿಯೊ, ಭಾರತ ಮತ್ತು ಇರಾನ್ ನಡುವೆ ವ್ಯಾಪಾರ ಒಪ್ಪಂದವಿದೆ ಎಂದು ನನಗನಿಸುವುದಿಲ್ಲ ಎಂದು ಹೇಳಿದರು.
ಕೆಲವು ಮಾತುಕತೆಗಳ ವಿಚಾರದಲ್ಲಿ ನಾವೂ ಕೂಡ ಇರಾನ್ ಆಡಳಿತದ ಕೆಲವು ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇವೆ. ಅವರೊಂದಿಗೆ ಸಂಪರ್ಕವೂ ನಡೆದಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೇಳಿದರು.





