ದರ್ಶನ್ ಅಣ್ಣನನ್ನು ಹೊರಗೆ ಕರೆದುಕೊಂಡು ಬರಬೇಕು ಅಂತಿದ್ದರೆ, ನನ್ನನ್ನು ಯಾಕೆ ತಡೆಯುತ್ತಿದ್ದೀರಾ? : ಧನ್ವೀರ್

ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಧನ್ವೀರ್ ಗೌಡ ನಡುವಿನ ವಿವಾದಾತ್ಮಕ ವಿದ್ಯಾಮಾನಗಳ ಬೆನ್ನಲ್ಲೇ, ನಟ ಧನ್ವೀರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಕುರಿತು ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ದರ್ಶನ್ ಹಾಗೂ ಧನ್ವೀರ್ ನಡುವಿನ ಸ್ನೇಹ, ಇನ್ನೊಂದೆಡೆ ವಿಜಯಲಕ್ಷ್ಮಿ ಜೊತೆ ಧನ್ವೀರ್ ಅವರ ಶೀತಲ ಸಮರ. ಸದ್ಯಕ್ಕೆ ಈ ವಿಚಾರವೇ ಚರ್ಚೆಯಲ್ಲಿದೆ. ಇದರ ನಡುವೆ ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಬಗ್ಗೆ ಪೊಸ್ಟ್‌ ಹಾಕಿದ್ದಾರೆ.

ಲೀಕ್ಡ್ ಆಡಿಯೋ ವಿವಾದಗಳ ನಡುವೆಯೂ ಧನ್ವೀರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅವರು ವ್ಯಕ್ತಪಡಿಸಿರುವ ಪ್ರಮುಖ ಹೇಳಿಕೆಗಳು ಈ ರೀತಿಯಾಗಿದೆ.

  • “ನನ್ನ ಹೃದಯದಲ್ಲಿ ದರ್ಶನ್‌ಗಿರೋ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ.”
  • “ದರ್ಶನ್ ಸರ್ ಅಕೌಂಟ್‌ನಿಂದ ನನ್ನನ್ನು ಬ್ಲಾಕ್ ಮಾಡಬಹುದು, ಆದರೆ ಅವರ ಮೇಲಿರುವ ನನ್ನ ಪ್ರೀತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.”
  • “ದರ್ಶನ್ ಅಣ್ಣನನ್ನು ಹೊರಗೆ ಕರೆದುಕೊಂಡು ಬರಬೇಕು ಅಂತಿದ್ದರೆ, ನನ್ನನ್ನು ಯಾಕೆ ತಡೆಯುತ್ತಿದ್ದೀರಾ? ಮೊದಲು ನಾನು ನನ್ನ ಕೈಲಾದ ಕೆಲಸ ಮಾಡುತ್ತೇನೆ.”
  • “ನಾನು ಪ್ರೂವ್ ಮಾಡೋಕೆ ರೆಡಿ ಇದ್ದೇನೆ, ಅವರೂ ಬಂದು ಪ್ರೂವ್ ಮಾಡಲಿ.
  • “ನಾನು ನೆಪಮಾತ್ರ, ಇಲ್ಲಿ ದರ್ಶನ್ ಅಣ್ಣನೇ ನಿಜವಾದ ಟಾರ್ಗೆಟ್.”

ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಟ ಧನ್ವೀರ್‌ ಹಾಗೂ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಪ್ರತಿಕ್ರಿಯಿಸಿದ್ದ ಧನ್ವೀರ್‌, ತಮ್ಮ ಬಳಿ ಕೂಡ ಆಡಿಯೋ ದಾಖಲೆಗಳಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದರು.

ನನ್ನ ಬಳಿಯೂ ಆಡಿಯೋ ದಾಖಲೆಗಳಿವೆ. ಎಲ್ಲೋ ಕುಳಿತು ವೈರಲ್‌ ಮಾಡುವುದರಿಂದ ಯಾವುದೇ ಅರ್ಥವಿಲ್ಲ. ಆ ಆಡಿಯೋದಲ್ಲಿ ಎಲ್ಲವೂ ನಾನು ಮಾತನಾಡಿಲ್ಲ. ಕೆಲ ವಿಷಯಗಳನ್ನ ತುಂಬಾ ಚೆನ್ನಾಗಿ ಸೇರಿಸಿದ್ದಾರೆ. ನನ್ನ ಬಳಿ ಅವ್ರೇ ಮಾತನಾಡಿರುವ ಅಡಿಯೋಗಳಿವೆ ಶೀಘ್ರದಲ್ಲೇ ಬಿಡುಗಡೆ ಮಾಡ್ತೀನಿ. ವಿಜಯಲಕ್ಷ್ಮಿ ಮಾತ್ರವಲ್ಲದೆ, ಅವರ ಹಿಂದೆ ಯಾರಿದ್ದಾರೆ ಎಂಬುದೂ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಧನ್ವೀರ್‌ ಹೇಳಿದ್ದರು.

ಇದರ ನಡುವೆ ಧನ್ವೀರ್ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಬಗ್ಗೆ ಪೊಸ್ಟ್‌ ಹಂಚಿಕೊಂಡಿದ್ದಾರೆ. ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ. ನಿಮ್ಮ ವಿರೋಧದಿಂದ ಸಾಯುವುದೂ ಇಲ್ಲ. ಜಗತ್ತು ಏನೇ ಹೇಳಲಿ, ಕಾಲವೇ ಬದಲಾಗಲಿ ನನ್ನ ನಿಲುವು ಒಂದೇ. ನನ್ನ ಅಭಿಮಾನ ಒಂದೇ, ದರ್ಶನ್ ಸರ್! ‘ದೆನ್ ನೌ ಫಾರೆವರ್` ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ಸರ್ ಅಕೌಂಟ್‌ನಿಂದ ನನ್ನನ್ನು ಬ್ಲಾಕ್ ಮಾಡಬಹುದು. ನಾನೇ ಅನ್‌ಫಾಲೋ ಮಾಡಿದೆ ಎಂದು ಬಿಂಬಿಸಬಹುದು. ಜನರ ಮುಂದೆ ನನ್ನನ್ನು ಕೆಟ್ಟವನಾಗಿ ಬಿಂಬಿಸಬಹುದು. ನನ್ನ ವಿರುದ್ಧ ಎಷ್ಟು ಬೇಕಾದರೂ ನೆಗೆಟಿವ್ ಪಿಆರ್ ಮಾಡಬಹುದು… ಆದರೆ ನನ್ನ ಹೃದಯದ ಬಾಗಿಲಲ್ಲಿ ದರ್ಶನ್ ಸರ್ ಅವರಿಗಿರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ ಎಂದು ಧನ್ವೀರ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ದರ್ಶನ್ ಜೈಲು ಸೇರಿದಾಗಿನಿಂದ ಧನ್ವೀರ್ ಅವರದ್ದೆನ್ನಲಾದ ಕೆಲವು ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್‌ಗೆ ಧನ್ವೀರ್ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ಬಳಿ ದೂರು-ಪ್ರತಿದೂರುಗಳು ದಾಖಲಾಗಿವೆ. ಈ ಎಲ್ಲಾ ಗೊಂದಲಗಳ ನಡುವೆಯೂ ಧನ್ವೀರ್, ದರ್ಶನ್ ಮೇಲಿನ ತಮ್ಮ ಅಭಿಮಾನ ಹಾಗೂ ಸ್ನೇಹ ಬದಲಾಗುವುದಿಲ್ಲ ಎಂದು ಈ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

Share it :

Leave a Reply

Your email address will not be published. Required fields are marked *