ಗುಲಾಮನಾಗುವ ಬದಲಿಗೆ ಗುಂಡಿಗೆ ಬಲಿಯಾಗುತ್ತೇನೆ” ಕ್ರಾಂತಿಕಾರಿ ಚಂದ್ರಶೇಖರ ಅಜಾದ್

ನಾನು ಸ್ವತಂತ್ರನಾಗಿ ಹುಟ್ಟಿದೆ, ಸ್ವತಂತ್ರನಾಗಿ ಬದುಕುತ್ತೇನೆ, ಸ್ವತಂತ್ರನಾಗಿ ಸಾಯುತ್ತೇನೆ” ಎಂದು ಗುಡುಗಿದ ಚಂದ್ರಶೇಖರ ಅಜಾದ್ ಅವರ 94ನೇ ಬಲಿದಾನ ದಿನ ಇದೇ ವರ್ಷ ಫೆಬ್ರವರಿ 27 ಕ್ಕೆ ಆಚರಿಸಿದ್ದೇವೆ. ಇಂದು ತಿಲಕ್ ಜನ್ಮದಿನದ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮತ್ತೊಬ್ಬ ಮಹಾನ್ ಕ್ರಾಂತಿಕಾರಿಯನ್ನು ನೆನೆಯೋಣ.

ಇತಿಹಾಸಕಾರ ಬಿಪನ್ ಚಂದ್ರ ಅವರ ಇಂಡಿಯಾಸ್ ಸ್ಟ್ರೈಗ್ಗಲ್ ಫಾರ್ ಇಂಡಿಪೆಂಡೆನ್ಸ್ ಮತ್ತು ಹಿಂದೂಸ್ತಾನ್ ಸಮಾಜವಾದಿ ಪ್ರಜಾಸಭೆ ದಾಖಲೆಗಳ ಆಧಾರದ ಮೇಲೆ ಅವರ ರೋಚಕ ಜೀವನ.

ಬಾಲ್ಯ ಮತ್ತು “ಅಜಾದ್” ಎಂಬ ಹೆಸರು: ಚಂದ್ರಶೇಖರ ತಿವಾರಿ ಅವರು 1906 ರ ಜುಲೈ 23 ರಂದು ಮಧ್ಯಪ್ರದೇಶದ ಭಾವ್ರಾ ಗ್ರಾಮದಲ್ಲಿ ಜನಿಸಿದರು. ತಂದೆ ಪುರೋಹಿತರು. ಬಾಲ್ಯದಿಂದಲೇ ಧೈರ್ಯ ಮತ್ತು ದೇಶಭಕ್ತಿ. 1921 ರಲ್ಲಿ ಕೇವಲ 15 ವರ್ಷದ ಹುಡುಗನಾಗಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಬಂಧಿತರಾದರು. ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಹೆಸರು ಕೇಳಿದಾಗ “ನನ್ನ ಹೆಸರು ಅಜಾದ್” ಎಂದು ಹೇಳಿದರು. ತಂದೆಯ ಹೆಸರು “ಸ್ವಾತಂತ್ರ್ಯ”, ಮನೆ “ಜೈಲು” ಎಂದು ಉತ್ತರಿಸಿದರು. ಆ ದಿನದಿಂದಲೇ ಅವರು “ಅಜಾದ್” ಆದರು.

ಕಾಕೋರಿ ರೈಲು ದರೋಡೆ ಈ ಕ್ರಾಂತಿಗೆ ಅಡಿಪಾಯ :1925 ರ ಆಗಸ್ಟ್ 9 ರಂದು ನಡೆದ ಕಾಕೋರಿ ರೈಲು ದರೋಡೆಯಲ್ಲಿ ಅಜಾದ್ ಪ್ರಮುಖ ಪಾತ್ರ ವಹಿಸಿದರು. ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಜೊತೆ ಸೇರಿ ಬ್ರಿಟಿಷ್ ಸರ್ಕಾರದ ಹಣವನ್ನು ಕ್ರಾಂತಿಕಾರಿ ಚಟುವಟಿಕೆಗಾಗಿ ದೋಚಿದರು.ಈ ಕೇಸಿನಲ್ಲಿ ನಾಲ್ಕು ಜನರಿಗೆ ಗಲ್ಲು ಶಿಕ್ಷೆ ಆಯಿತು. ಆದರೆ ಅಜಾದ್ ತಪ್ಪಿಸಿಕೊಂಡರು. ಆಗಲೇ ಅವರು ನಿರ್ಧರಿಸಿದರು: “ಗಾಂಧೀಜಿಯವರ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಬರುವುದಿಲ್ಲ. ಬ್ರಿಟಿಷರಿಗೆ ಬಂದೂಕಿನಿಂದಲೇ ಉತ್ತರ ಕೊಡಬೇಕು”.

ಹಿಂದೂಸ್ತಾನ್ ಸಮಾಜವಾದಿ ಪ್ರಜಾ ಸಭೆ :1928 ರಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು ಜೊತೆ ಸೇರಿ ಅವರು ಹಿಂದೂಸ್ತಾನ್ ಸಮಾಜವಾದಿ ಪ್ರಜಾಸಭೆ ಎಂಬ ಸಂಘಟನೆ ಕಟ್ಟಿದರು. ಈ ಸಂಘಟನೆಯ ಉದ್ದೇಶ: “ಬಂದೂಕಿನ ಮೂಲಕ ಬ್ರಿಟಿಷರನ್ನು ಹೊಡೆದು, ಭಾರತದಲ್ಲಿ ಸಮಾಜವಾದಿ ಪ್ರಜಾಸತ್ತಾತ್ಮಕ ರಾಷ್ಟ್ರ ಕಟ್ಟುವುದು”.

ಅಜಾದ್ ಈ ಸಂಘಟನೆಯ ಕಮಾಂಡರ್ ಆದರು. ಅವರ ನೇತೃತ್ವದಲ್ಲಿ ಯುವಕರಿಗೆ ಬಂದೂಕು, ಬಾಂಬ್ ತಯಾರಿಕೆ ತರಬೇತಿ ನೀಡಲಾಯಿತು. ಲಾಹೋರ್, ಕಾನ್ಪುರ, ಅಲಹಾಬಾದ್ ನಲ್ಲಿ ಗುಪ್ತ ನೆಲೆಗಳು ತೆರೆದರು.

ಲಾಲಾ ಲಜಪತ್ ರಾಯ್ ಸಾವಿಗೆ ಪ್ರತೀಕಾರ ತೀರಿಸುಕೊಳ್ಳುಲು 1928 ರಲ್ಲಿ ಸೈಮನ್ ಕಮಿಷನ್ ವಿರೋಧ ಪ್ರತಿಭಟನೆಯಲ್ಲಿ ಪೊಲೀಸರ ಲಾಠಿ ಏಟಿನಿಂದ “ಪಂಜಾಬ್ ಕೇಸರಿ” ಲಾಲಾ ಲಜಪತ್ ರಾಯ್ ಹುತಾತ್ಮರಾದರು. ಇದಕ್ಕೆ ಕಾರಣನಾದ ಬ್ರಿಟಿಷ್ ಅಧಿಕಾರಿ ಜಾನ್ ಸಾಂಡರ್ಸ್.

ಹಿಂದೂಸ್ತಾನ್ ಸಮಾಜವಾದಿ ಪ್ರಜಾಸಭೆ ಯ ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿತು. 1928 ಡಿಸೆಂಬರ್ 17 ರಂದು ಭಗತ್ ಸಿಂಗ್ ಮತ್ತು ರಾಜಗುರು ಸಾಂಡರ್ಸ್ ನನ್ನು ಗುಂಡಿಕ್ಕಿ ಕೊಂದರು. ಈ ಕಾರ್ಯಾಚರಣೆಯ ರೂವಾರಿ ಚಂದ್ರಶೇಖರ ಅಜಾದ್. ಅವರು ಸ್ಥಳದಲ್ಲೇ ನಿಂತು ಇಬ್ಬರಿಗೂ ರಕ್ಷಣೆ ನೀಡಿದರು.

ಕೇಂದ್ರ ವಿಧಾನಸಭೆಯಲ್ಲಿ ಬಾಂಬ್ – ಅಜಾದ್ ಅವರ ಯೋಜನೆ:1929 ರಲ್ಲಿ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಅವರು ದೆಹಲಿಯ ಕೇಂದ್ರ ವಿಧಾನಸಭೆಯಲ್ಲಿ “ಬ್ರಿಟಿಷ್ ಕಾನೂನುಗಳ ವಿರೋಧ” ಎಂದು ಬಾಂಬ್ ಎಸೆದರು. ಯಾರಿಗೂ ಗಾಯವಾಗದಂತೆ ಯೋಜನೆ ಮಾಡಿದ್ದು ಅಜಾದ್ ಅವರೇ. ಉದ್ದೇಶ: ಬಂಧನವಾಗಿ ನ್ಯಾಯಾಲಯದಲ್ಲಿ ಬ್ರಿಟಿಷರ ಅನ್ಯಾಯವನ್ನು ಜಗತ್ತಿಗೆ ತೋರಿಸುವುದು.

ಬ್ರಿಟಿಷ್ ಪೊಲೀಸರಿಗೆ ಸಿಗದ ಅಜಾದ್ ನೆರಳು.ಅಜಾದ್ ಅವರನ್ನು ಹಿಡಿಯಲು ಬ್ರಿಟಿಷರು ಬಹುಮಾನ ಘೋಷಿಸಿದರು. 5 ವರ್ಷಗಳ ಕಾಲ ಅವರು ಪೊಲೀಸರ ಕಣ್ಣಿಗೆ ಮಣ್ಣೆರೆಚಿದರು. ವೇಷ ಬದಲಾಯಿಸಿ, ಸುಳ್ಳು ಹೆಸರಿನಲ್ಲಿ ಓಡಾಡುತ್ತಿದ್ದರು. “ಅಜಾದ್” ಎಂಬ ಹೆಸರೇ ಅವರ ಶಕ್ತಿಯಾಗಿತ್ತು. ಅಂದರೆ “ಸ್ವತಂತ್ರ”.

ಅವರು ಹೇಳುತ್ತಿದ್ದರು: “ಬ್ರಿಟಿಷರು ನನ್ನನ್ನು ಹಿಡಿಯಲು ಬಯಸಿದರೆ ಅದು ನನ್ನ ಶವದ ಮೇಲೆ ಮಾತ್ರ ಸಾಧ್ಯ”.1931 ರ ಫೆಬ್ರವರಿ 27 ಕೊನೆಯ ಯುದ್ಧ ಅಲಹಾಬಾದ್ ನ ಆಲ್ಫ್ರೆಡ್ ಪಾರ್ಕ್ ನಲ್ಲಿ ತನ್ನ ಸಹೋದ್ಯೋಗಿ ಸುಖದೇವ್ ರಾಜ್ ನನ್ನು ಭೇಟಿಯಾಗಲು ಹೋದರು. ಪೊಲೀಸರಿಗೆ ಮಾಹಿತಿ ಸೋರಿಕೆಯಾಯಿತು.

ಬ್ರಿಟಿಷ್ ಮುಖ್ಯ ಪೊಲೀಸ್ ಅಧಿಕಾರಿ ನಾಟ್ ಮತ್ತು ಇತರ ಹನ್ನೆರಡು ಮಂದಿ ಪೊಲೀಸರು ಪಾರ್ಕ್ ಅನ್ನು ಸುತ್ತುವರಿದರು. ಅಜಾದ್ ಒಬ್ಬರೇ ಇದ್ದರು. ಗುಂಡಿನ ಚಕಮಕಿ ಆರಂಭವಾಯಿತು. ಹದಿನೈದು ನಿಮಿಷಗಳ ಕಾಲ ಒಬ್ಬರೇ ಹನ್ನೆರಡು ಜನರ ವಿರುದ್ಧ ಹೋರಾಡಿದರು.

ಕೊನೆಗೆ ಗುಂಡುಗಳು ಖಾಲಿಯಾದವು. ಪೊಲೀಸರು ಜೀವಂತವಾಗಿ ಹಿಡಿಯಲು ಮುಂದೆ ಬಂದಾಗ, ಅವರು ತಮ್ಮ ಕೊನೆಯ ಗುಂಡನ್ನು ತಮ್ಮ ತಲೆಗೆ ಹಾರಿಸಿಕೊಂಡರು. “ದೇಶದ ಗುಲಾಮನಾಗುವ ಬದಲು ಸಾಯುವುದೇ ಲೇಸು”ಎಂಬ ಅವರ ಮಾತು ನಿಜವಾಯಿತು.ಅವರು ಸತ್ತಾಗ ಅವರ ಬಳಿ ಇದ್ದ ಬಂದೂಕಿಗೆ “ಕ್ರಾಂತಿ” ಎಂದು ಹೆಸರಿತ್ತು. ಆ ಬಂದೂಕು ಇಂದಿಗೂ ಅಲಹಾಬಾದ್ ಮ್ಯೂಸಿಯಂನಲ್ಲಿದೆ.

ಅಜಾದ್ ಅವರ ತತ್ವ : ಸಂಪೂರ್ಣ ಸ್ವಾತಂತ್ರ್ಯ- ಅರ್ಧ-ಅರ್ಧ ಸ್ವರಾಜ್ಯ ಬೇಡ. ಪೂರ್ಣ ಸ್ವಾತಂತ್ರ್ಯವೇ ಗುರಿ. ಯುವಶಕ್ತಿ-“ಯುವಕರೇ ದೇಶದ ಭವಿಷ್ಯ. ಅವರ ಕೈಯಲ್ಲಿ ಬಂದೂಕು ಮತ್ತು ಪುಸ್ತಕ ಎರಡೂ ಇರಬೇಕು” ತ್ಯಾಗ-ಕುಟುಂಬ, ಮನೆ, ಸುಖ ಎಲ್ಲವನ್ನೂ ತ್ಯಾಗ ಮಾಡಿದರು. 24 ವರ್ಷ ಬದುಕಿದರೂ 100 ವರ್ಷ ಬದುಕಿದಷ್ಟು ಕೆಲಸ ಮಾಡಿದರು.

ಇಂದಿಗೆ ಅಜಾದ್ ಏಕೆ ಪ್ರಸ್ತುತವಾಗುತ್ತಾರೆ? ಅಜಾದ್ ನಮಗೆ ಕಲಿಸುವುದು, “ಸ್ವಾತಂತ್ರ್ಯಕ್ಕಾಗಿ ರಾಜಿ ಇಲ್ಲ”. ಮಾತಿನಿಂದ ಆಗದಿದ್ದಾಗ ಕ್ರಿಯೆ ಬೇಕು. ದೇಶದ ಗಡಿಯಲ್ಲಿ ಸೈನಿಕರು ಇಂದು ಹೇಗೆ ಹೋರಾಡುತ್ತಿದ್ದಾರೋ, ಅದೇ ಮನೋಭಾವವನ್ನು ಅಜಾದ್ 100 ವರ್ಷದ ಹಿಂದೆ ತೋರಿಸಿದರು. ಅವರು ಯಾವುದೇ ರಾಜಕೀಯ ಸ್ಥಾನ ಬಯಸಲಿಲ್ಲ. ಯಾವುದೇ ಪ್ರಶಸ್ತಿ ನಿರೀಕ್ಷಿಸಲಿಲ್ಲ. ಕೇವಲ “ಭಾರತ ಮಾತೆ ಸ್ವತಂತ್ರಳಾಗಬೇಕು” ಎಂಬ ಒಂದೇ ಗುರಿ.

ಯುವಕರಿಗೆ ಕರೆ, ಚಂದ್ರಶೇಖರ ಅಜಾದ್ 24 ವರ್ಷದಲ್ಲಿ ತೋರಿಸಿದ ಧೈರ್ಯ ನಮಗೆ ಪಾಠ. “ನಾನು” ಅಲ್ಲ “ನಾವು” ಮತ್ತು “ನಮ್ಮ ದೇಶ” ಮುಖ್ಯ ಎಂಬುದನ್ನು ಅವರು ಜೀವನದಿಂದ ತೋರಿಸಿದರು.ಅವರ ಬಲಿದಾನ ವ್ಯರ್ಥವಾಗಬಾರದು. ಅವರ ಅಜಾದ್ ಭಾರತದ ಕನಸನ್ನು ನಾವು ಪ್ರಜ್ಞಾವಂತರಾಗಿ ಸುಸಜ್ಜಿತ ಭಾರತವನ್ನಾಗಿ ಮಾಡೋಣ.ಭಾರತ ಮಾತಾ ಕೀ ಜೈ ಎಂದು ಬರಹಗಾರ ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others