ಅಮೆರಿಕ ಮತ್ತು ಇಸ್ರೇಲ್ನ ಒತ್ತಡಕ್ಕೆ ಇರಾನ್ ಎಂದಿಗೂ ಶರಣಾಗುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ತಿಳಿಸಿದ್ದಾರೆ.
ಇರಾನ್ನ ಸೇನಾ ಪಡೆಗಳನ್ನು ಗುರಿಯಾಗಿಸುವ ಬದಲು ನಾಗರಿಕ ಮೂಲಸೌಕರ್ಯ, ಆಹಾರ ಪೂರೈಕೆ ಮತ್ತು ಜನರ ಜೀವನೋಪಾಯಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಅಮೆರಿಕ ಮತ್ತು ಇಸ್ರೇಲ್ನ ಒತ್ತಡಕ್ಕೆ ಇರಾನ್ ಎಂದಿಗೂ ಶರಣಾಗುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಹೇಳಿದ್ದಾರೆ.
ಇರಾನ್ನ ಪರಮಾಣು ಕಾರ್ಯಕ್ರಮದ ಮೇಲೆ ವ್ಯಾಪಕ ಅಂತರರಾಷ್ಟ್ರೀಯ ನಿಗಾ ಇರಿಸಲಾಗಿತ್ತು ಮತ್ತು ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದದ ಚೌಕಟ್ಟಿನೊಳಗೆ ಪರಮಾಣು ವಿಚಾರಗಳ ಕುರಿತು ಮಾತುಕತೆ ನಡೆಸಲು ಟೆಹ್ರಾನ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಇರಾನ್ನ ಪರಮಾಣು ಚಟುವಟಿಕೆಗಳು ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ನಿಯಮಗಳ ವ್ಯಾಪ್ತಿಯಲ್ಲಿಯೇ ನಡೆದಿವೆ ಎಂದು ಪೆಜೆಶ್ಕಿಯನ್ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಇರಾನ್ ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದದ ಸದಸ್ಯ ರಾಷ್ಟ್ರವಾಗಿದೆ ಎಂದು ಅವರು ಹೇಳಿದ್ದಾರೆ.
ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಬಯಸಿದ್ದರೆ, ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದದ ಸದಸ್ಯರಾಗುತ್ತಿರಲಿಲ್ಲ. ಈಗ ಅವರು ನಮ್ಮ ನೆಲದ ಮೇಲೆ ದಾಳಿ ನಡೆಸಲು ನೆಪಗಳು ಮತ್ತು ಕಾರಣಗಳನ್ನು ಸೃಷ್ಟಿಸುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಅವರು ಮಾನವೀಯತೆಯಿದ್ದಿದ್ದರೆ, ಜನರಿಗೆ ನೀರು, ಆಹಾರ ಮತ್ತು ಔಷಧಿಗಳ ಲಭ್ಯತೆಯನ್ನು ಏಕೆ ನಿರಾಕರಿಸಬೇಕು? ಹೆದರಿಸಿ, ಬೆದರಿಸಿ ನಮ್ಮ ಜನರನ್ನು ಬೆದರಿಸಿ ಶರಣಾಗುವಂತೆ ಮಾಡಲು ಅವರಿಗೆ ಸಾಧ್ಯವಿಲ್ಲ. ಈ ದಬ್ಬಾಳಿಕೆಯ ಮುಂದೆ ಇರಾನ್ ಎಂದಿಗೂ ತಲೆಬಾಗಲ್ಲ ಎಂದು ತಿಳಿಸಿದ್ದಾರೆ.
ಪೆಜೆಶ್ಕಿಯನ್ ಸದ್ಯ ಭಾರತದಲ್ಲಿದ್ದು, ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂಡಿಯಾ ಟುಡೇ ಸಮೂಹದ ವಿದೇಶಾಂಗ ವ್ಯವಹಾರಗಳ ಸಂಪಾದಕಿ ಗೀತಾ ಮೋಹನ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.
ಇರಾನ್ನ ಪರಮಾಣು ಕಾರ್ಯಕ್ರಮದ ಕುರಿತ ಆರೋಪಗಳನ್ನು ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ದಾಳಿಗೆ ನೆಪವಾಗಿ ಬಳಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಅಮೆರಿಕನ್ನರು ನಿಜವಾಗಿಯೂ ವೀರ ಯೋಧರಾಗಿದ್ದರೆ, ನಮ್ಮ ಶೂರ ಸೇನಾ ಪಡೆಗಳನ್ನು ಎದುರಿಸಲಿ. ನಾಗರಿಕ ಮೂಲಸೌಕರ್ಯ, ಆಹಾರ ಪೂರೈಕೆ ಮತ್ತು ಜನರ ಜೀವನೋಪಾಯಗಳ ಮೇಲೆ ಏಕೆ ಯುದ್ಧ ನಡೆಸಬೇಕು?” ಎಂದು ಹೇಳಿದ್ದಾರೆ.





