KEAಯಿಂದ 4,723 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ವಿವಿಧ ಇಲಾಖೆಗಳ ಒಟ್ಟು 4,723 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ.

ಇದರಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ ಸೇರಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಯ 572, ಸರ್ವೆ ಇಲಾಖೆಯ 750 ಭೂಮಾಪಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುವ ಶಾಲೆಗಳ 1,087 ಶಿಕ್ಷಕರು ಹಾಗೂ 2,314 ಕೆಎಸ್ಆರ್ ಪಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಕಲ್ಯಾಣ ಕರ್ನಾಟಕ ವೃಂದಕ್ಕೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳ ಹುದ್ದೆಗಳಿಗೂ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಕೆಲವು ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದಲೇ ಆರಂಭವಾಗಿದೆ. ಅರ್ಹರು ಅಧಿಸೂಚನೆಯನ್ನು ಒಮ್ಮೆ ಓದಿ, ಅನ್ವಯವಾಗುವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಅಧಿಸೂಚನೆಯಲ್ಲೇ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದ್ದು ಆ ಪ್ರಕಾರ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಇರುವ ಕೊನೆ ದಿನಾಂಕವನ್ನು ನೋಡಿಕೊಂಡು ನಿಗದಿತ ದಿನದೊಳಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗೆ ಕೆಇಎ ವೆಬ್ ಸೈಟ್ ಗೆ ಭೇಟಿ ನೀಡಲು ಅವರು ಸಲಹೆ ನೀಡಿದ್ದಾರೆ.

Share it :

Leave a Reply

Your email address will not be published. Required fields are marked *